ಹುಬ್ಬಳ್ಳಿ: ಗ್ರಾಮದ ಮಕ್ಕಳು ಪ್ರೌಢಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗಬಾರದು,ಇದರಿಂದಾಗಿಯೇ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ರೈತರೊಬ್ಬರು ಸ್ವಯಂ ಪ್ರೇರಣೆಯಿಂದ ಒಂದು ಎಕರೆ ಕೃಷಿ ಭೂಮಿ ದಾನಕ್ಕೆ ಮುಂದೆ ಬಂದಿದ್ದು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡಬೇಕು ಎಂಬುದು ಗ್ರಾಮಸ್ಥರ ಒಕ್ಕೊರಲ ಬೇಡಿಕೆಯಾಗಿದೆ.
ತಾಲೂಕಿನ ಅಗಡಿ ಗ್ರಾಮದ ರೈತ ಅರವಿಂದ ಚನ್ನಪ್ಪ ಸಂಗಣ್ಣವರ ತಮ್ಮ ಫಲವತ್ತಾದ ಕೃಷಿ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಹತ್ತು ವರ್ಷಗಳಿಂದ ತಮ್ಮ ಗ್ರಾಮಕ್ಕೊಂದು ಪ್ರೌಢಶಾಲೆ ಮಂಜೂರು ಮಾಡಿ ಇದಕ್ಕೆ ಬೇಕಾದ ಭೂಮಿ ನೀಡುವುದಾಗಿ ಮನವಿ ಮಾಡಿಕೊಂಡು ಬಂದಿದ್ದರು. ಇವರ ಬೇಡಿಕೆ ಕೇವಲ ಭರವಸೆಯಾಗಿ ಉಳಿದಿತ್ತು. ಆದರೆ, ಗ್ರಾಮದ ಪ್ರಮುಖರ ಪಟ್ಟು ಬಿಡದ ಪ್ರಯತ್ನದಿಂದಾಗಿ ಗ್ರಾಮಕ್ಕೆ ಶಾಲೆ ಬರುವ ನಿರೀಕ್ಷೆ ಮೂಡಿದೆ. ಶಿಕ್ಷಣ ಸಚಿವರೇ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದು, 10 ವರ್ಷದ ಕನಸು ಈಡೇರುವ ನಿರೀಕ್ಷೆ ಮೂಡಿಸಿದೆ.
ಹೈಸ್ಕೂಲ್ ಅಗತ್ಯವಿದೆ: ಈಗಾಗಲೇ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿದ್ದು, 1ರಿಂದ 8ನೇ ತರಗತಿವರೆಗೆ 320 ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಆದರೆ 9 ಹಾಗೂ 10ನೇ ತರಗತಿಗಾಗಿ ಇಲ್ಲಿಂದ 86 ವಿದ್ಯಾಥಿಗಳು ಅರಳಿಕಟ್ಟಿಗೆ ಹೋಗುತ್ತಿದ್ದು, ಇದರಲ್ಲಿ 41 ವಿದ್ಯಾರ್ಥಿನಿಯರಿದ್ದಾರೆ. ಒಂದು ಬಸ್ ತಪ್ಪಿದರೆ ನಡೆದುಕೊಂಡು ಹೋಗಬೇಕು. ಇದೇ ಕಾರಣಕ್ಕಾಗಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳಿವೆ. ಇಲ್ಲಿ ಶಾಲೆ ಆರಂಭವಾಗುವುದರಿಂದ ಪಾಲಿಕೊಪ್ಪದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ವಿದ್ಯಾರ್ಥಿಗಳ ಸಂಖ್ಯೆ ಇರುವು ದರಿಂದ ಗ್ರಾಮಕ್ಕೆ ಪ್ರೌಢಶಾಲೆಯ ಅಗತ್ಯವಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
ಪ್ರಯತ್ನಕ್ಕೆ ಈಗ ಫಲ: ಅರವಿಂದ ಸಂಗಣ್ಣವರ ಅವರು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಭೂಮಿ ನೀಡುವುದಾಗಿ ಲಿಖೀತ ಪತ್ರ ನೀಡಿದ್ದಾರೆ. ಇವರ ಶಿಕ್ಷಣ ಪ್ರೀತಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದರು.
ಗ್ರಾಮಕ್ಕೆ ಶಾಲೆ ಅಗತ್ಯವಿದೆ ಎಂಬುದನ್ನು ಮನಗಂಡ ಸಚಿವರು, ಪ್ರಸ್ತಾವನೆ ಕಳುಹಿಸುವಂತೆ ಶಿಕ್ಷಣ ಇಲಾಖೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಇದೀಗ ಪ್ರಸ್ತಾವನೆ ಸಿದ್ಧವಾಗಿದ್ದು, ಸರಕಾರಕ್ಕೆ ಸಲ್ಲಿಕೆಯಾಗಬೇಕಿದೆ.
ಪ್ರಸ್ತಾವನೆಗೆ ಸೀಮಿತವಾಗದಿರಲಿ: ಕಳೆದ ವರ್ಷದಿಂದ ಗ್ರಾಮಸ್ಥರು ಬೆಂಗಳೂರಿಗೆ ಹೋಗಿ ಅಲ್ಲಿಂದ ಇಲ್ಲಿಯವರೆಗೂ ಶಿಕ್ಷಣ ಸಚಿವರಿಗೆ ಮನವಿ ನೀಡುತ್ತಾ ಬಂದಿದ್ದಾರೆ. ಆದರೆ ಈವರೆಗೂ ಯಾವುದೇ ಫಲ ದೊರೆತಿಲ್ಲ. ಇದೀಗ ಶಿಕ್ಷಣ ಸಚಿವರೇ ಗ್ರಾಮಕ್ಕೆ ಆಗಮಿಸಿ ವಸ್ತುಸ್ಥಿತಿ ಅರಿತು ಪ್ರಸ್ತಾವನೆಗೆ ಸೂಚಿಸಿದ್ದು, ಕೇವಲ ಪ್ರಸ್ತಾವನೆಗೆ ಸೀಮಿತವಾಗದೆ ಇದು ಕಾರ್ಯ ರೂಪಕ್ಕೆ ಬರಬೇಕು. ಬೇರೆ ಊರಿಗೆ ಹೋಗಬೇಕು ಎನ್ನುವುದಕ್ಕಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕು ದೊರೆಯಬೇಕಾಗಿದೆ.
ಹೇಮರಡ್ಡಿ ಸೈದಾಪುರ