Advertisement

ರೈಲಿನಲ್ಲೇ ಅಂಗಡಿ ಪ್ರಗತಿ ಪರಿಶೀಲನಾ ಸಭೆ!

11:00 PM Jun 23, 2019 | Team Udayavani |

ಬೆಳಗಾವಿ: ಪ್ರಯಾಣಿಕರ ಸುರಕ್ಷತೆ, ಪ್ರಾಮಾಣಿಕತೆ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ವತ್ಛತೆ ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಭಾನುವಾರ ಬೆಳಗಾವಿಯಿಂದ ಹುಬ್ಬಳ್ಳಿಗೆ ವಿಶೇಷ ರೈಲಿನಲ್ಲೇ ಪ್ರಯಾಣ ಬೆಳೆಸಿ ಅಲ್ಲಿಯೇ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಹಾಗೂ ರೈಲ್ವೆ ಹಳಿಗಳ ಸ್ಥಿತಿಗತಿ ವೀಕ್ಷಣೆ ನಡೆಸಿ ವಿನೂತಹ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಚಿವರು, ಪ್ರಯಾಣಿಕರ ಸುರಕ್ಷತೆಗೆ ಮೊದಲ ಪ್ರಾಶಸ್ತ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ಸಭೆ ಜೊತೆಗೆ ಬೆಳಗಾವಿ, ಖಾನಾಪುರ, ಲೋಂಡಾ, ಅಳ್ನಾವರ ನಿಲ್ದಾಣಗಳಲ್ಲಿ ಇಳಿದು ಪರಿಶೀಲನೆ ನಡೆಸಿದ ಸಚಿವರು, ಪ್ರಯಾಣಿಕರಿಂದ ಮನವಿ ಸ್ವೀಕರಿಸಿದರು. ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಪ್ರತಿಯೊಂದು ರೈಲ್ವೆ ನಿಲ್ದಾಣ, ಬೋಗಿಗಳಲ್ಲಿ ಸ್ವತ್ಛತೆ ಇರುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಪ್ರಯಾಣಿಕರ ಸುರಕ್ಷತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.

ಲೋಂಡಾ-ಮೀರಜ್‌ ಡಬ್ಲಿಂಗ್‌ ಕಾಮಗಾರಿ ನಡೆದಿರುವುದನ್ನು ಪರಿಶೀಲಿಸಿ, ದೀರ್ಘಾವಧಿ ಯೋಜನೆ ಬದಲು ಪ್ರಯಾಣಿಕರ ಅನುಕೂಲಕ್ಕಾಗಿ ಅಲ್ಪಾವಧಿ ಯೋಜನೆ ರೂಪಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮುಂದಾಗಬೇಕು. ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಮನವಿಗಳ ಮಹಾಪೂರ: ಇದೇ ವೇಳೆ ಬೆಳಗಾವಿ, ಖಾನಾಪುರ ಹಾಗೂ ಲೋಂಡಾ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆ ಸಮಾಲೋಚನೆ ನಡೆಸಿದ ಸಚಿವ ಸುರೇಶ ಅಂಗಡಿ ಅವರಿಗೆ ದೂರು ಹಾಗೂ ಮನವಿಗಳ ಮಹಾಪೂರವೇ ಹರಿದು ಬಂತು.

Advertisement

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ಬೆಳಗಾವಿಗೆ ಬೆಳಗಿನ ಸಮಯ ತಡವಾಗಿ ಬರುತ್ತದೆ. ಇದರಿಂದ ಬಹಳ ತೊಂದರೆಯಾಗುತ್ತಿದ್ದು, ಬೆಳಗ್ಗೆ 6:30ರಿಂದ 7 ಗಂಟೆಗೆ ಬೆಳಗಾವಿಗೆ ಬರುವಂತೆ ಸಮಯ ಬದಲಾವಣೆ ಮಾಡಬೇಕು. ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭಿಸಬೇಕು.

ಈಗ ಧಾರವಾಡದಿಂದ ಮೈಸೂರಿಗೆ ಇರುವ ರೈಲನ್ನು ಮೀರಜ್‌ವರಗೆ ವಿಸ್ತರಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು. ಲೋಂಡಾ ಮತ್ತು ಮೀರಜ್‌ ಮಧ್ಯೆ ಡಬ್ಲಿಂಗ್‌ ಕಾರ್ಯ ನಡೆದಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಹೊಸ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು.

ಈಗ ಬೆಳಗಾವಿ ನಿಲ್ದಾಣದ ಬಳಿ ಇರುವ ಗುಡ್‌ಶೆಡ್‌ನ್ನು ಸದ್ಯದಲ್ಲೇ ಸ್ಥಳಾಂತರ ಮಾಡಲಾಗುವುದು ಎಂದರು. ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್‌, ಮಾಜಿ ಶಾಸಕ ವಿಶ್ವನಾಥ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next