ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲದಲ್ಲಿ ಕಾರ್ತಿಕ ಅಂಗಾರಕ ಸಂಕಷ್ಟಹರ ಚತುರ್ಥಿಯು ನ.23 ಮಂಗಳವಾರದಂದು ಜರುಗಿದ್ದು, ಶ್ರೀದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ.
ಅಪಾರ ಸಂಖ್ಯೆ ಭಕ್ತರಿಂದ ಶ್ರೀದೇವರ ದರ್ಶನ
ಈ ಹಿನ್ನೆಲೆಯಲ್ಲಿ ಶ್ರೀ ಸನ್ನಿಧಿಗೆ ಜಿಲ್ಲೆಯಾದ್ಯಂತ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಶ್ರೀದೇವರ ದರ್ಶನ ಪಡೆದರು. ಇಲಾಖೆಯ ಮಾರ್ಗಸೂಚಿಯಂತೆ ಸುಮಾರು 4 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಆನೆಗುಡ್ಡೆ ಶ್ರೀ ವಿನಾಯಕ ದೇಗುಲಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ
ಕುಂಭಾಸಿ ಆನೆಗುಡ್ಡೆ ಶ್ರೀವಿನಾಯಕ ದೇಗುಲಕ್ಕೆ ನ.23 ಕಾರ್ತಿಕ ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ವಡೋದರದ ಸರ್ವೋದಯ ಸೇವಾ ಟ್ರಸ್ಟ್‌ನ ಟ್ರಸ್ಟಿ ಸೋಮ್ ಬಾ ಮೋದಿ ಅವರು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ದೇವಳದ ವತಿಯಿಂದ ಸೋಮ್ ಬಾ ಮೋದಿ ಅವರನ್ನು ಗುರುತಿಸಿ ಗೌರವಿಸಲಾಯಿತು.
ಇದನ್ನೂ ಓದಿ:ಪರಿಹಾರ ಕೊಡದಿದ್ದರೆ ಬೃಹತ್ ಹೋರಾಟ: ಕಾಂಗ್ರೆಸ್ ಎಚ್ಚರಿಕೆ
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಮತ್ತು ಸಹೋದರರು, ಮುಂಬಯಿ ಉದ್ಯಮಿ ಮೋಹನ್ ಗೌಡ, ಉಡುಪಿ ಪ್ರಸಾದ್ ನೇತ್ರಾಲಯದ ಡಾ| ಕೃಷ್ಣಪ್ರಸಾದ್, ದೇವಳದ ಮೆನೇಜರ್ ನಟೇಶ್ ಕಾರಂತ್ ತೆಕ್ಕಟ್ಟೆ ಹಾಗೂ ಅರ್ಚಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಚಿತ್ರಗಳು : ಲೋಕೇಶ್ ಆಚಾರ್ಯ ತೆಕ್ಕಟ್ಟೆ