ಮದನಪಲ್ಲಿ: ಮೌಡ್ಯದ ಬಲೆಗೆ ಬಿದ್ದ ಆಂಧ್ರದ ವಿದ್ಯಾವಂತ ದಂಪತಿ, ಬೆಳೆದು ನಿಂತ ತಮ್ಮ ಮಕ್ಕಳನ್ನೇ ಬಲಿಕೊಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೇವಲ ಈ ದಂಪತಿಯಷ್ಟೇ ಅಲ್ಲದೇ, ಅವರ ಮಕ್ಕಳಾದ ಅಲೇಖ್ಯ(27), ಸಾಯಿದಿವ್ಯ(22)ಕೂಡ ಮೌಢಾÂಚರಣೆಗಳಲ್ಲಿ ತೊಡಗಿದ್ದರು ಎಂದು ತನಿಖೆಯಿಂದ ಪತ್ತೆಯಾಗಿದೆ. ಅಲೇಖ್ಯ ಶಾಲೆಯ ಸಮಯದಿಂದಲೂ ತಾನು ಶಿವನರೂಪಿಯೆಂದು ಸ್ನೇಹಿತೆಯರಿಗೆಲ್ಲ ಹೇಳುತ್ತಿದ್ದರೆ, ಸಾಯಿದಿವ್ಯ ತನ್ನ ಮನೆಯಲ್ಲಿ ಅಗೋಚರ ದುಷ್ಟ ಶಕ್ತಿಗಳು ಸುತ್ತಾಡುತ್ತಿವೆ ಎನ್ನುತ್ತಿದ್ದಳಂತೆ. ಸಾಯುವ ಮುನ್ನಾದಿನ ಸಾಯಿದಿವ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ “ಶಿವ ಬರುತ್ತಿದ್ದಾನೆ, ಕೆಲಸ ಪೂರ್ಣಗೊಂಡಿದೆ’ ಎಂದು ಬರೆದುಕೊಂಡಿದ್ದಳು.
ನಾಯ್ಡು ದಂಪತಿ ಕೆಲವು ಸಮಯದ ಹಿಂದೆ 3 ಅಂತಸ್ತಿನ ಹೊಸ ಮನೆಗೆ ಶಿಫ್ಟ್ ಆದಾಗಿನಿಂದಲೂ ಈ ಕುಟುಂಬದ ಮೌಡ್ಯ ಅತಿರೇಕಕ್ಕೆ ತಲುಪಿತ್ತು ಎನ್ನುತ್ತಾರೆ ನೆರೆಹೊರೆಯವರು. ಅದರಲ್ಲೂ ಕಳೆದೊಂದು ವಾರದಿಂದ ಇಡೀ ಕುಟುಂಬ ಹೊರಗೇ ಬರದೇ, ವಿವಿಧ ಪೂಜೆಗಳಲ್ಲಿ ತೊಡಗಿತ್ತು.
ದಂಪತಿಯೂ ಸಾವಿಗೆ ಸಿದ್ಧರಾಗಿದ್ದರು: ನಾಯ್ಡು ದಂಪತಿ ತಮ್ಮ ಮಕ್ಕಳನ್ನು ಕೊಂದ ಮೇಲೆ, ತಾವೂ ಸಾಯಲು ಸಿದ್ಧರಾಗಿದ್ದರು. ಹೆಣ್ಣುಮಕ್ಕಳನ್ನು ಕೊಂದ ಅನಂತರ, ಪುರುಷೋತ್ತಮ್ ನಾಯ್ಡು, ತನ್ನ ಸಹೋದ್ಯೋಗಿಗೆ ಕರೆ ಮಾಡಿ, “ಮಕ್ಕಳಿಬ್ಬರನ್ನೂ ಕೊಂದಿದ್ದೇವೆ, ಅವರು ಮತ್ತೆ ಹುಟ್ಟಿಬರಲಿದ್ದಾರೆ, ಕೆಲವೇ ಕ್ಷಣಗಳಲ್ಲಿ ನಾವೂ ಕಲಿಯುಗದಿಂದ ಜೀವ ತ್ಯಾಗ ಮಾಡಿ, ಸತ್ಯಯುಗದಲ್ಲಿ ಜೀವತಾಳಲಿದ್ದೇವೆ, ಈ ಅದ್ಭುತ ನೋಡಲು ನೀನು ಬಾ’ ಎಂದಾಗ, ಗಾಬರಿಗೊಂಡ ಸಹೋದ್ಯೋಗಿ ಪೊಲೀಸರಿಗೆ ಸುದ್ದಿ ತಲುಪಿಸಿದ್ದಾನೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಲ್ಲಿನ ಬೀಭತ್ಸ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ.
ಹೆಣ್ಣುಮಕ್ಕಳಿಬ್ಬರಿಗೂ ಸೀರೆಯುಡಿಸಿ, ಅವರ ಬಾಯಲ್ಲಿ ಕಳಶವಿಟ್ಟು, ತ್ರಿಶೂಲದಿಂದ, ಡಂಬೆಲ್ಸ್‌ಗಳಿಂದ ಸಾಯಿಸಿದ್ದ ಈ ದಂಪತಿ, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಇದ್ದರು ಎನ್ನುತ್ತಾರೆ ಪೊಲೀಸರು. ಎಲ್ಲಕ್ಕಿಂತ ಪುರುಷೋತ್ತಮ್‌ರ ಮಡದಿ ಪದ್ಮಜಾ, “ನಮ್ಮ ಮನೆಯಲ್ಲಿ ಶಿವ ಇದ್ದಾನೆ, ಶೂ ಧರಿಸಿ ಒಳಬರಬೇಡಿ’ ಎಂದು ಪೊಲೀಸರನ್ನು ನೂಕಲು ಮುಂದಾಗಿದ್ದಷ್ಟೇ ಅಲ್ಲದೇ, “ಸ್ವಲ್ಪ ಹೊತ್ತು ತಡೆಯಿರಿ ಮಕ್ಕಳಿಬ್ಬರೂ ಮತ್ತೆ ಜೀವತಾಳಲಿದ್ದಾರೆ’ ಎನ್ನುತ್ತಾ ಮಗಳ ಶವದ ಸುತ್ತ ಹಾಡು ಹಾಡುತ್ತಾ ಕುಣಿಯಲಾರಂಭಿಸಿದರಂತೆ.
ನಾನೇ ಕೋವಿಡ್ ಎಂದ ಪದ್ಮಜಾ: ಪೊಲೀಸರು ದಂಪತಿಯನ್ನು ಬಂಧಿಸಿ, ಕೋವಿಡ್ ಟೆಸ್ಟ್ ಮಾಡಿಸಲು ಕರೆದೊಯ್ದಾಗಲು ಪದ್ಮಜಾರ ಹುಚ್ಚಾಟ ನಿಲ್ಲಲಿಲ್ಲ. ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ ಪದ್ಮಜಾ, “ಕೋವಿಡ್ ಚೀನಾದಿಂದ ಬಂದಿದೆಯೆಂದು ಭಾವಿಸಿದ್ದೀರಾ, ಅದು ಶಿವನ ಒಂದು ಕೂದಲಿಂದ ಸೃಷ್ಟಿಯಾಗಿರುವುದು. ನಾನೇ ಕೋವಿಡ್!’ ಎನ್ನುತ್ತಾ ರಚ್ಚೆಹಿಡಿದರೆಂದು ವೈದ್ಯರು ಹೇಳುತ್ತಾರೆ.
ಕಣ್ಣೀರು ಹಾಕಿದ ಅಪ್ಪ :
ಆರಂಭದಲ್ಲಿ ಭ್ರಮೆಯಲ್ಲಿದ್ದಂತೆ ಕಂಡ ಪುರುಷೋತ್ತಮ್ ಮಕ್ಕಳ ಶವಸಂಸ್ಕಾರದ ವೇಳೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಆದರೆ ಚಿತೆಯಿಂದ ತಾಯಿಯನ್ನು ದೂರವೇ ನಿಲ್ಲಿಸಲಾಗಿತ್ತು. ಆಗಲೂ ಆಕೆಯ ಕಣ್ಣಿನಲ್ಲಿ ಹನಿ ನೀರು ಜಿನುಗಲಿಲ್ಲ, ಬದಲಾಗಿ “ನೀನು ಸಹೋದ್ಯೋಗಿಗೆ ಫೋನ್ ಮಾಡಿದ್ದರಿಂದಲೇ ನಮ್ಮ ಮಕ್ಕಳು ಸತ್ತರು, ಇನ್ನೂ ಸ್ವಲ್ಪ ಹೊತ್ತು ಕಾದಿದ್ದರೆ ಅವರು ಸತ್ಯಯುಗದಲ್ಲಿ ಹುಟ್ಟುತ್ತಿದ್ದರು’ ಎಂದು ಗಂಡನನ್ನು ದೂಷಿಸುತ್ತಿದ್ದರು ಎನ್ನುತ್ತಾರೆ ಪೊಲೀಸರು.