ಹೈದರಾಬಾದ್: ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಉದ್ಯಮಿಯೊಬ್ಬರು ತಾನು ಜೀವಮಾನವಿಡಿ ಶ್ರಮಪಟ್ಟು ದುಡಿದ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡದೇ ಪೆಟ್ಟಿಗೆಯೊಂದರಲ್ಲಿ ಕೂಡಿ ಇಟ್ಟಿದ್ದರು. ಇತ್ತೀಚೆಗೆ ತಾನು ಸಂಗ್ರಹಿಸಿಟ್ಟ ಹಣವನ್ನು ತೆರೆದು ನೋಡಿದ ಉದ್ಯಮಿಗೆ ಆಘಾತವಾಗಿತ್ತು…ಅದಕ್ಕೆ ಕಾರಣ ಏನು ಗೊತ್ತಾ…ಗೆದ್ದಲ ಹುಳ !
ಇದನ್ನೂ ಓದಿ:ಟೇಕ್ ಆಫ್ ಗೆ ಸಿದ್ಧವಾಗುತ್ತಿದೆ ಫ್ಲೈಯಿಂಗ್ ಕಾರ್…! ಇನ್ಮೇಲೆ ಪ್ರಯಾಣ ಮತ್ತಷ್ಟು ಸುಖಮಯ…
ಪೆಟ್ಟಿಗೆ ಸುರಕ್ಷಿತವಾಗಿಲ್ಲದ ಪರಿಣಾಮ 500 ರೂ ಹಾಗೂ 200 ರೂಪಾಯಿ ನೋಟಿನ ಕಂತೆಗಳನ್ನು ಗೆದ್ದಲ ಹುಳ ತಿಂದು ಹಣವನ್ನು ಚೂರುಪಾರು ಮಾಡಿ ಹಾಕಿರುವುದಾಗಿ ವರದಿ ತಿಳಿಸಿದೆ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಂ ನಿವಾಸಿ, ಉದ್ಯಮಿ ಬಿಜ್ಲಿ ಜಾಮಲಯ್ಯ ತಾನು ವರ್ಷಾನುಗಟ್ಟಲೇ ದುಡಿದು ಕೂಡಿಟ್ಟ ಹಣ ಗೆದ್ದಲು ತಿಂದು ಹಾಳು ಮಾಡಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು ಎಂದು ವರದಿ ವಿವರಿಸಿದೆ.
ಜಾಮಲಯ್ಯ ಅವರು ಹಂದಿ ಮಾರಾಟ ವ್ಯಾಪಾರ ನಡೆಸುತ್ತಿದ್ದರು. ದಿನಂಪ್ರತಿ ವಹಿವಾಟಿನ ಹಣವನ್ನು ಅವರು ಬ್ಯಾಂಕ್ ನಲ್ಲಿ ಇಡುವ ಬದಲು ಟ್ರಂಕ್ ನಲ್ಲಿ ಕೂಡಿ ಇಡುತ್ತಿದ್ದರು. ತಾನು ಮನೆ ಕಟ್ಟಬೇಕು ಎಂಬ ಕನಸಿನೊಂದಿಗೆ ಸುಮಾರು ಐದು ಲಕ್ಷ ರೂಪಾಯಿ ಹಣ ಟ್ರಂಕ್ ನಲ್ಲಿ ಇಟ್ಟಿರುವುದಾಗಿ ವರದಿ ತಿಳಿಸಿದೆ.
ಸಣ್ಣ ಉದ್ಯಮಿ ಜಾಮಲಯ್ಯ ಬೇರೆ ದಾರಿ ಕಾಣದೆ ಚೂರು, ಚೂರಾದ ಹಣವನ್ನು ಸ್ಥಳೀಯ ಮಕ್ಕಳಿಗೆ ವಿತರಿಸಿದ್ದರು, ಮಕ್ಕಳು ಅರ್ಧಂಬರ್ಧ ಹರಿದ ನೋಟನೊಂದಿಗೆ ರಸ್ತೆಯಲ್ಲಿ ಆಟವಾಡುತ್ತಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಹಣದೊಂದಿಗೆ ಆಟವಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ನಂತರ ಈ ಹಣ ಎಲ್ಲಿಯದು? ಯಾರು ಮಕ್ಕಳಿಗೆ ಕೊಟ್ಟರು ಎಂಬ ಕುರಿತು ಪೊಲೀಸರು ತನಿಖೆ ನಡೆಸಲು ಹೋದಾಗ ಉದ್ಯಮಿ ಜಾಮಲಯ್ಯ ಅವರ ವಿಷಯ ಬಹಿರಂಗವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.