Advertisement

ನೂರಕ್ಕೂ ಅಧಿಕ ಆಂಧ್ರ ಶಾಸಕರ ಸಾಮೂಹಿಕ ರಜೆ ! ಯಾಕೆ ಗೊತ್ತಾ ?

03:41 PM Nov 24, 2017 | Team Udayavani |

ಹೈದರಾಬಾದ್‌ : ಆಂಧ್ರ ಪ್ರದೇಶ ವಿಧಾನಸಭಾ ಅಧಿವೇಶನ ಈಗ ಜಾರಿಯಲಿದೆ. ಆದರೂ ಕನಿಷ್ಠ ನೂರು ಮಂದಿ ಶಾಸಕರು ಒಮ್ಮೆಲೇ ಸಾಮೂಹಿಕ ರಜೆಗೆ ಅರ್ಜಿ ಹಾಕಿದ್ದಾರೆ. ಕಾರಣವೇನು ಗೊತ್ತಾ ? ಮದುವೆ ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೆ ! 

Advertisement

ವಿಶೇಷವೆಂದರೆ ನೂರಕ್ಕೂ ಅಧಿಕ ಮಂದಿ ಶಾಸಕರು ಹಾಕಿರುವ ಸಾಮೂಹಿಕ ರಜೆಯನ್ನು ಸರಕಾರ ಮಂಜೂರು ಮಾಡಿದೆ‌. 

ಎನ್‌ಡಿಟಿವಿ ವರದಿ ಮಾಡಿರುವಂತೆ ಮುಂದಿನ ಕೆಲವು ದಿನಗಳಲ್ಲಿ ಆಂಧ್ರ ಪ್ರದೇಶದಲ್ಲಿ ಸುಮಾರು 1.20 ಲಕ್ಷ ಮದುವೆಗಳು ನಡೆಯಲಿಕ್ಕಿವೆ. ಮದುವೆಗಳಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಸಾಮೂಹಿಕ ರಜೆ ಹಾಕಿರುವ ಶಾಸಕರು, ಅಧಿವೇಶನ ಕೊನೆಗೊಂಡ ಬಳಿಕ ಎರಡು ಹೆಚ್ಚುವರಿ ದಿನಗಳ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ವಿಧಾನಸಭಾ ಸ್ಪೀಕರ್‌ ಕೊಡೇಲಾ ಶಿವಪ್ರಸಾದ ರಾವ್‌ ಅವರು ನ.23ರಂದು “ಸದನವು ಈ ಗುರುವಾರ ಮತ್ತು ಶುಕ್ರವಾರ ಕಲಾಪ ನಡೆಸುವುದಿಲ್ಲ’ ಎಂದು ಪ್ರಕಟಿಸಿದ್ದಾರೆ. ‘ಈ ಎರಡು ದಿನ ಕಲಾಪ ನಡೆಸಬಾರದೆಂಬ ಶಾಸಕರ ಕೋರಿಕೆಯನ್ನು ಮನ್ನಿಸಲಾಗಿದೆ; ತಮಗೆ ಮದುವೆ ಸಮಾರಂಭಗಳಿಗೆ ಹೋಗುವುದಿದೆ ಎಂಬ ಅವರ ಕಾರಣವನ್ನು ಒಪ್ಪಿಕೊಳ್ಳಲಾಗಿದೆ’  ಎಂದು ಡಾ. ರಾವ್‌ ಹೇಳಿದರು. 

ಅಂತೆಯೇ ಆಂಧ್ರಪ್ರದೇಶ ವಿಧಾನಸಭೆಯು ಈಗಿನ್ನು ನ.28ರಂದು ಪುನರಾರಂಭಗೊಂಡು ವಾರಾಂತ್ಯದ ವರೆಗೂ ಕಲಾಪ ಕೈಗೊಳ್ಳಲಿದೆ.

Advertisement

ಆಂಧ್ರ ವಿಧಾನ ಸಭೆಯು ಕಳೆದ ವರ್ಷ ಮಾರ್ಚ್‌ನಲ್ಲಿ ಶಾಸಕರ ವೇತನ ಮತ್ತು ಇತರ ಭತ್ಯೆಗಳನ್ನು ಏರಿಸುವ ಮಸೂದೆಯನ್ನು ಮಂಜೂರು ಮಾಡಿತ್ತು. ಅದರ ಪ್ರಕಾರ ಪ್ರತಿಯೋರ್ವ ಶಾಸಕರ ಮಾಸಿಕ ವೇತನವನ್ನು ಆಗಿನ 95,000 ರೂ.ಗಳಿಂದ 1.25 ಲಕ್ಷ ರೂ.ಗೆ ಏರಿಸಲಾಗಿತ್ತು.

ಅದೇ ರೀತಿ ತಿಂಗಳ ವಾಸ್ತವ್ಯ ಭತ್ಯೆಯನ್ನು 25,000 ರೂ.ಗಳಿಂದ 50,000 ರೂ.ಗೆ ಏರಿಸಲಾಗಿತ್ತು. ನಿವೃತ್ತ ಶಾಸಕರ ಮಾಸಿಕ ಪಿಂಚಣಿಯನ್ನು ಕೂಡ 50,000 ರೂ.ಗೆ ಏರಿಸಲಾಗಿತ್ತು. ಇದಲ್ಲದೆ ಪ್ರತಿಯೋರ್ವ ಶಾಸಕರಿಗೆ ನಿಯತಕಾಲಿಕ ಹಾಗೂ ಪುಸ್ತಕ ಖರೀದಿಗೆಂದು ವರ್ಷಕ್ಕೆ 20,000 ರೂ. ನೀಡಲಾಗುತ್ತಿದೆ. 

ಮೋಟಾರ್‌ ಕಾರು/ವಸತಿ ಕಟ್ಟಡ ಮುಂಗಡವನ್ನು ದುಪ್ಪಟ್ಟು ಗೊಳಿಸಿ 20.00 ಲಕ್ಷ ರೂ.ಗೆ ನಿಗದಿಸಲಾಗಿದೆ. ಆದರೆ ಇದನ್ನು ಶಾಸಕರು ನಿಬಡ್ಡಿಯಾಗಿ ಮರುಪಾವತಿಸಬೇಕಿದೆ. 

ಆದರೆ ವೈಎಸ್‌ಆರ್‌ಸಿ ಸದಸ್ಯ ಕೋಟಮರೆಡ್ಡಿ ಶ್ರೀಧರ ರೆಡ್ಡಿ ಅವರು ಈ ಮಸೂದೆಯನ್ನು ವಿರೋಧಿಸಿ “ರಾಜ್ಯವು ತೀವ್ರವಾದ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿರುವ ನಮಗೆ ನಾವೇ ನಮ್ಮ ಸಂಬಳವನ್ನು ಈ ಪರಿಯಾಗಿ ಹೆಚ್ಚಿಸಿಕೊಳ್ಳುವುದನ್ನು ಜನರು ಎಂದೂ ಮೆಚ್ಚುವುದಿಲ್ಲ; ಕ್ಷಮಿಸುವುದೂ ಇಲ್ಲ’ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next