ಮುಂಬಯಿ: ಕರ್ನಾಟಕ ಸಂಘ ಅಂಧೇರಿ ಇದರ 12ನೇ ವಾರ್ಷಿಕೋತ್ಸವ ಸಂಭ್ರಮವು ಜು. 8ರಂದು ಅಪರಾಹ್ನ 2.30 ರಿಂದ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.
ಅಪರಾಹ್ನ 2.30 ರಿಂದ ಪ್ರಾರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಾಬಾಸ್ ಗ್ರೂಪ್ ಆಫ್ ಕಂಪೆನೀಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ ಅವರು ದೀಪಪ್ರಜ್ವಲಿಸಿ ಉದ್ಘಾಟಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಜ್ಯೋತಿಷ್ಯ ಡಾ| ಎಂ. ಜೆ. ಪ್ರವೀಣ್ ಭಟ್, ಅತಿಥಿಗಳಾಗಿ ಕರ್ನಾಟಕ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ, ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವ ಆರ್. ಶಂಕರ್, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೈದ್ರಾಬಾದ್ ಸಾಮಾಜಿಕ ಕಾರ್ಯಕರ್ತೆ ಡಾ| ಕೊತ್ತಕೃಷ್ಣವೇಣಿ, ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಕ್ರಿಸ್ಟಲ್ ತಾಯ್‌ಸ್ಪಾ ಇದರ ಸುನೀಲ್ ಕುಂದರ್, ಸಾಕಿನಾಕಾ ಭ್ರಮರಾಂಬಿಕಾ ದೇವಸ್ಥಾನದ ಉಪಾಧ್ಯಕ್ಷ, ಉದ್ಯಮಿ ನಿಲೇಶ್ ಶೆಟ್ಟಿಗಾರ್, ರಾಮಕ್ಷತ್ರೀಯ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಶ್ರೀಧರ ಶೇರುಗಾರ್, ಸಾಕಿನಾಕಾ ಶಾರದಾ ಕನ್ನಡ ಹೈಸ್ಕೂಲ್‌ನ ಪ್ರಾಂಶುಪಾಲೆ ವನಿತಾ ಕುಮಾರ್, ಉದ್ಯಮಿ ವಿಶ್ವನಾಥ ಶೇರುಗಾರ್ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮುಂಬಯಿಯ ಸಮಗ್ರ ತುಳು-ಕನ್ನಡಿಗರ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಮತ್ತು ರಾಜ್ಯ ಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಅಪರಾಹ್ನ 3 ರಿಂದ ಸಂಘದ ಮಕ್ಕಳಿಂದ ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ, ಆನಂತರ ವಿವಿಧ ಸಂಘ-ಸಂಸ್ಥೆಗಳು, ಭಜನ ಮಂಡಳಿಗಳಿಂದ ಭಜನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ ಪಿಎಚ್‌ಡಿ ಪಡೆದ ಡಾ| ರಘುರಾಮ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಪತ್ರಕರ್ತ ದಯಾ ಸಾಗರ್ ಚೌಟ, ಕರ್ನೂರು ಮೋಹನ್ ರೈ, ರಾಜ್‌ಕುಮಾರ್ ಕಾರ್ನಾಡ್ ಇವರು ನಿರ್ವಹಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಪಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಮತ್ತು ಸತೀಶ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ರಾವ್, ಗೌರವ ಕೋಶಾಧಿಕಾರಿ ಗಣೇಶ್ ಬಲ್ಯಾಯ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ :ಸುಭಾಷ್ ಶಿರಿಯಾ