Advertisement

 ಅಂಡಾರು: ಕುಸಿಯುತ್ತಿರುವ ಶಾಲಾ ಕಟ್ಟಡ

10:10 AM Jul 05, 2018 | |

ಅಜೆಕಾರು: ಸರಕಾರಿ ಹಿ.ಪ್ರಾ. ಶಾಲೆಯ ಕಟ್ಟಡವು ಕುಸಿಯುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಜು. 2ರಂದು ಸಚಿತ್ರ ವರದಿ ಪ್ರಕಟವಾಗಿದ್ದನ್ನು ಗಮನಿಸಿದ ಕಾರ್ಕಳ ಶಿಕ್ಷಣಾಧಿಕಾರಿಯವರು ಒಂದು ವಾರದ ಒಳಗೆ ಸಮಗ್ರ ವರದಿ ನೀಡುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ. 17 ವರ್ಷಗಳ ಹಿಂದೆ ಅಂಡಾರು ಪೇಟೆಯ ಸಮೀಪದ ಶಾಲೆಗೆ ಕಾದಿರಿಸಲಾದ 4 ಎಕ್ರೆ ಜಾಗದಲ್ಲಿ ಸುಮಾರು 2.50 ಲಕ್ಷ ರೂ. ವೆಚ್ಚಮಾಡಿ ಕಟ್ಟಡ ನಿರ್ಮಿಸಲಾಗಿತ್ತು. ಆದರೆ ಶಾಲೆ ನಿರ್ಮಾಣದ ಅನಂತರ ಒಂದು ದಿನವೂ ಇದರಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಯದೆ ಪಾಳು ಬಿದ್ದಿತ್ತು.

Advertisement

ಪತ್ರಿಕಾ ವರದಿ ಗಮನಕ್ಕೆ ಬರುತ್ತಿದ್ದಂತೆ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್‌ ಅವರು ಶಾಲೆಯ ಮುಖ್ಯ ಶಿಕ್ಷಕರಿಗೆ ಒಂದು ವಾರದ ಒಳಗೆ ಶಾಲಾಭಿವೃದ್ಧಿ ಸಮಿತಿಯ ತುರ್ತು ಸಭೆ ಕರೆದು ಕಟ್ಟಡದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಶಿಕ್ಷಣಾಧಿಕಾರಿಯವರ ಆದೇಶ ಬರುತ್ತಿದ್ದಂತೆ ಎಚ್ಚೆತ್ತ ಶಾಲೆಯ ಮುಖ್ಯ ಶಿಕ್ಷಕರು ಜು.5 ಕ್ಕೆ ಶಾಲಾಭಿವೃದ್ಧಿ ಸಮಿತಿಯ ತುರ್ತು ಸಭೆ ಕರೆದಿದ್ದುಈ ಸಭೆಯಲ್ಲಿ ಶಾಲೆಯ ಕಟ್ಟಡದ ಅಭಿವೃದ್ಧಿ,ಸದ್ಬಳಕೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿ ಶಿಕ್ಷಣಾಧಿಕಾರಿಯವರಿಗೆ ವರದಿ ನೀಡಲಾಗುವುದು ಎಂದು ಸಮಿತಿ  ತಿಳಿಸಿದೆ.

ವರದಿ ನೀಡಲು ಸೂಚನೆ
ಕುಸಿಯುತ್ತಿರುವ ಶಾಲಾ ಕಟ್ಟಡದ ಅಭಿವೃದ್ಧಿಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಸಲುವಾಗಿ ಶಾಲಾಭಿವೃದ್ಧಿ   ಸಮಿತಿಯ ಸಭೆ ಕರೆದು ಕಟ್ಟಡ ದುರಸ್ತಿಗೆ ತಗಲುವ ವೆಚ್ಚದ ಬಗ್ಗೆ ಎಂಜಿನಿಯರ್‌ ಅವರ ಅಂದಾಜು ಪಟ್ಟಿ ಜತೆ ಸಮಗ್ರ ವರದಿಯನ್ನು ಒಂದು ವಾರದೊಳಗೆ ನೀಡಲು ಸೂಚಿಸಲಾಗಿದೆ.
-ಮಂಗಳಲಕ್ಷ್ಮೀ ಪಾಟೀಲ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು,  ಕಾರ್ಕಳ

 ತುರ್ತು ಸಭೆ
ಶಿಕ್ಷಣಾಧಿಕಾರಿಯವರ ಸೂಚನೆಯಂತೆ ಜು.5 ರಂದು ಶಾಲಾಭಿವೃದ್ಧಿ ಸಮಿತಿಯ ತುರ್ತು ಸಭೆ ಕರೆಯಲಾಗಿದ್ದು ಕಟ್ಟಡ ದುರಸ್ತಿ ಬಗ್ಗೆ ಸದಸ್ಯರ ಸಲಹೆ ಸೂಚನೆ ಪಡೆದು ಸೂಕ್ತ ನಿರ್ಣಯ ಕೈಗೊಂಡು ವರದಿ ನೀಡಲಾಗುವುದು.
– ಲಕ್ಷ್ಮೀ ಕಿಣಿ, ಅಧ್ಯಕ್ಷರು, ಶಾಲಾಭಿವೃದ್ಧಿ  ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next