Advertisement

ಬರ ಎದುರಿಸಲು ಮಾರ್ಗ ಇದೆ; ಮನಸ್ಸು ಬೇಕು

06:56 AM Mar 22, 2019 | |

ನೀರಿನ ಕೊರತೆ ಸದ್ಯ ನಾವು ಎದುರಿಸುವ ಸಮಸ್ಯೆಗಳ ಪೈಕಿ ಪ್ರಮುಖವಾದುದು. ವರ್ಷದಿಂದ ವರ್ಷಕ್ಕೆ ಬರ ಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿರುವುದು ಸಮಸ್ಯೆ ಬಿಗಡಾಯಿಸುತ್ತಿರುವುದಕ್ಕೆ ಸಾಕ್ಷಿ. ಇನ್ನೊಂದು ಮುಖ್ಯ ವಿಚಾರವೆಂದರೆ ಈ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆ. ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಸಮಸ್ಯೆ ಈಗಿನಷ್ಟು ಬೃಹದಾಕಾರವಾಗಿ ಕಾಡುವುದಿಲ್ಲ. ಜಲ ಸಂರಕ್ಷಣೆಯಲ್ಲಿ ಮಾದರಿಯಾಗಬಲ್ಲ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಅವುಗಳನ್ನು ಗುರುತಿಸುವ ಕೆಲಸವಾಗಬೇಕಷ್ಟೆ.

Advertisement

ಮಾದರಿ ಲಾಪೋಡಿಯಾ
ರಾಜಸ್ಥಾನದ ಲಾಪೋಡಿಯಾ ಬರ ಪರಿಸ್ಥಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆ. ಆದರೂ ನೀರಿನ ಸಂರಕ್ಷಣೆಯಲ್ಲಿ ಅದ್ಭುತ ಕೆಲಸ ಮಾಡಿದೆ. ಚೌಕ ಎನ್ನುವ ವ್ಯವಸ್ಥೆಯೊಂದಿಗೆ ಇಲ್ಲಿ ನೀರು ಇಂಗಿಸಲಾಗುತ್ತಿದ್ದು, ಮಾದರಿ ಎನಿಸಿಕೊಂಡಿದೆ.

ಬರ ನಿರ್ವಹಣೆಗಾಗಿ ಹಿಂದಿನಿಂದಲೇ ಭಾರತೀಯರು ಮಾರ್ಗೋಪಾಯ ಕಂಡುಕೊಂಡಿದ್ದರು. ಪಾರಂಜವ್ಯಗಳು (ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ) ಎಂದು ಕರೆಯಲ್ಪಡುವ ಇವು ಆಯಾಯ ಮಣ್ಣಿಗೆ, ವಾತಾವರಣಕ್ಕೆ ಹೊಂದಿಕೆಯಾಗುವ, ಬೀಳುವ ಮಳೆ ಆಧಾರದಲ್ಲಿ ದೇಶಾದ್ಯಂತ ಪ್ರಚಲಿತದಲ್ಲಿದ್ದವು. ರಾಜಸ್ಥಾನದ ಮರುಭೂಮಿಯಲ್ಲೂ ಅಲ್ಲಿಗೆ ಹೊಂದಿಕೆಯಾಗುವ ಇಂತಹ ವ್ಯವಸ್ಥೆ ಇತ್ತು. ಆದರೆ ಅವುಗಳನ್ನು ಮರೆತಿರುವುದು ಇಂದಿನ ದುಃಸ್ಥಿತಿಗೆ ಕಾರಣ. ಕೆರೆ, ಕಟ್ಟ, ಮದಕ, ಗೋಕಟ್ಟೆ, ಜೋಹಾಡ್‌ ಮುಂತಾದವುಗಳನ್ನು ಪುನರುಜ್ಜೀವನಗೊಳಿಸಿದರೆ ನೀರಿನ ಕೊರತೆ ನೀಗಬಹುದು. ಇದಕ್ಕೆ ಉತ್ತಮ ಉದಾಹರಣೆ ತಲೆಕೊಳ. ಹಿಂದೆಲ್ಲ ಕೆರೆಯ ಮೇಲ್ಭಾಗದಲ್ಲಿ ನೀರು ಇಂಗಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಇದಕ್ಕೆ ತಲೆಕೊಳ ಎಂದು ಹೆಸರು. ಹಿರಿಯರು ಮಾಡಿಟ್ಟಿರುವ ಇಂತಹ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದರೆ ಜಲ ಸಂರಕ್ಷಣೆಯ ದಾರಿ ಗೊಚರಿಸುತ್ತದೆ ಎನ್ನುತ್ತಾರೆ ಜಲ ತಜ್ಞ ಶ್ರೀ ಪಡ್ರೆ.

ಸತ್ಯಮೇವ ಜಯತೇ ವಾಟರ್‌ ಕಪ್‌
ಮಹಾರಾಷ್ಟ್ರದ ಡಾ| ಅವಿನಾಶ್‌ ಪಾಲ್‌ ಎನ್ನುವ ವೈದ್ಯ ಹಳ್ಳಿ ಹಳ್ಳಿಗೆ ತೆರಳಿ ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಪ್ರೇರೇಪಣೆಗೊಂಡ ನಟ ಅಮೀರ್‌ ಖಾನ್‌ ಹುಟ್ಟು ಹಾಕಿದ್ದೇ ಪಾನಿ ಫೌಂಡೇಷನ್‌. ಈ ಸಂಸ್ಥೆ ಮೂಲಕ ಹಳ್ಳಿಗಳಲ್ಲಿ ನಡೆಸುವ ಸ್ಪರ್ಧೆಯೇ ಸತ್ಯಮೇವ ಜಯತೇ ವಾಟರ್‌ ಕಪ್‌.

ಪಾನಿ ಫೌಂಡೇಷನ್‌ ಮಹಾರಾಷ್ಟ್ರದ ಬರ ಪೀಡಿತ ಗ್ರಾಮಗಳನ್ನು ಗುರುತಿಸಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತದೆ. ಸ್ಪರ್ಧೆ ನಡೆಯುವುದು ಒಟ್ಟು 45 ದಿನಗಳವರೆಗೆ. ಈ ಸಮಯದಲ್ಲಿ ಬರ ಪರಿಸ್ಥಿತಿ ಎದುರಿಸುವ ರೀತಿ, ನೀರು ಸಂರಕ್ಷಣೆಗೆ ಕೈಗೊಳ್ಳಬೇಕಾದ ವಿಧಾನಗಳನ್ನು ತಿಳಿಸಲಾಗುತ್ತದೆ. ತಜ್ಞರಿಂದ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಜತೆಗೆ ಪಾನಿ ಫೌಂಡೇಷನ್‌ ವೆಬ್‌ಸೈಟ್‌ನಲ್ಲಿ ಷರತ್ತುಗಳು, ಕಾರ್ಯ ವಿಧಾನ, ಹಿಂದಿನ ವರ್ಷಗಳ ಸಾಹಸಗಾಥೆಗಳು ಮುಂತಾದ 150ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್‌ ಲೋಡ್‌ ಮಾಡುತ್ತಾರೆ. ಇವುಗಳ ಸಹಾಯದಿಂದ ಗ್ರಾಮಸ್ಥರು ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಬೇಕು. ಸ್ಪರ್ಧೆಯಿಂದಾಗಿ ಅನೇಕ ಗ್ರಾಮಗಳು ಬರದಿಂದ ಪಾರಾಗಿವೆ ಎನ್ನುತ್ತಾರೆ ಶ್ರೀ ಪಡ್ರೆ.

Advertisement

ವೇಲು ಗ್ರಾಮದ ಯಶಸ್ಸಿನ ಕಥೆ
ಸತ್ಯಮೇವ ಜಯತೇ ವಾಟರ್‌ ಕಪ್‌ನ 2016ರ ಸಾಲಿನ ವಿಜೇತ ಮಹಾರಾಷ್ಟ್ರದ ವೇಲು ಗ್ರಾಮದ ಯಶಸ್ಸಿನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಬಲ್ಲದು. ವಾರ್ಷಿಕ ಸುಮಾರು 275 ಮಿ.ಮೀ. ಮಳೆ ಸುರಿಯುವ ಇಲ್ಲಿ ನೀರಿಗೆ  ಹಾಹಾಕಾರ ಸಾಮಾನ್ಯವಾಗಿತ್ತು. 2016ರಲ್ಲಿ ಸತ್ಯಮೇಯ ಜಯತೇ ವಾಟರ್‌ ಕಪ್‌ನಲ್ಲಿ ಭಾಗವಹಿಸಿದ ಅನಂತರ ಗ್ರಾಮದ ಚಿತ್ರಣವೇ ಬದಲಾಯಿತು. ಪ್ರತಿ ವರ್ಷ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಆಶ್ರಯಿಸುತ್ತಿದ್ದ ಗ್ರಾಮಸ್ಥರು ಇಂದು ಟ್ಯಾಂಕರ್‌ ನೀರು ಬೇಡ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ.

ನದಿ ಹರಿದ ಕಥೆ
ಮಳೆ ನೀರು ತಡೆದ ಕಾರಣ ನದಿಗಳು ಪುನರುಜ್ಜೀವನಗೊಂಡು ಮತ್ತೆ ಹರಿದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಸೊರಗಿದ್ದ ರಾಜಸ್ಥಾನದ ಜೈಪುರದಲ್ಲಿರುವ ನಾಂಡುವಾಳಿ ನದಿಯನ್ನು ಜನರೇ ಸೇರಿ ಐದು ವರ್ಷಗಳಲ್ಲಿ ಹರಿಯುವಂತೆ ಮಾಡಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಸರಕಾರದ ಅಟ್ಟಪ್ಪಾಡಿ ಹಿಲ್‌ ಏರಿಯಾ ಡೆವಲಪ್‌ಮೆಂಟ್‌ ಎಂಬ ಸಂಸ್ಥೆ ಸ್ಥಳೀಯರ ಸಹಭಾಗಿತ್ವದಲ್ಲಿ ಬತ್ತಿದ್ದ 28 ಕಿ.ಮೀ. ಉದ್ದದ ಕೊಡುಂಗರ ಪಳ್ಳಂ ಹರಿಯುವಂತೆ ಮಾಡಿದೆ. ಇದಕ್ಕಾಗಿ ಅನುಸರಿಸಿದ್ದು ಸರಳ ಮಾರ್ಗಗಳನ್ನು. ಒಂದು ಬೋಳಾದ ಪ್ರದೇಶ, ಗುಡ್ಡಗಳಿಗೆ ಹಸುರು ಹೊದೆಸಿದ್ದು. ಇನ್ನೊಂದು ಹರಿವ ಮಳೆ ನೀರನ್ನು ಇಂಗಿಸಿದ್ದು. ಇತ್ತೀಚೆಗೆ ಸಾಗರ ಸಮೀಪದ ದ್ಯಾವಸಹೊಳೆ ಎನ್ನುವ 10 ಕಿ.ಮೀ. ಉದ್ದದ ಹೊಳೆಯನ್ನು ಪುನರುಜ್ಜೀವನಗೊಳಿಸಲು ಸ್ಥಳೀಯರು ಮುಂದಾಗಿರುವುದು ಉತ್ತಮ ಬೆಳವಣಿಗೆ. 

ಸೂಕ್ತ ಅಧ್ಯಯನ ಅಗತ್ಯ
ನೀರಿನ ಕೊರತೆ ನೀಗಲು ಮಳೆ ನೀರು ಸಂಗ್ರಹದ ಜತೆಗೆ ಅರಣ್ಯ ಪ್ರದೇಶ, ಹಸುರು ಆವರಣ ಬೆಳೆಸಬೇಕು. ಕಾಡನ್ನು ಉಳಿಸಲು ಶ್ರಮಿಸಬೇಕು. ಕಾಡ್ಗಿಚ್ಚು ತಡೆಗೆ ಕ್ರಮ ಕೈಗೊಳ್ಳಬೇಕು. ಭಾರತ ಮಾತ್ರವಲ್ಲ ತೃತೀಯ ಜಗತ್ತಿನ ಎಲ್ಲ ದೇಶಗಳ ನೀರಿನ ಸುಸ್ಥಿರತೆಗೆ ಬೇಕಾದ ಪಾಠ ಭಾರತದ ಚರಿತ್ರೆಯಲ್ಲಿದೆ. ಅವುಗಳ ಸೂಕ್ತ ಅಧ್ಯಯನ ಅಗತ್ಯ.
 -ಶ್ರೀ ಪಡ್ರೆ, ಜಲ ತಜ್ಞ

ರಮೇಶ ಬಳ್ಳಮೂಲೆ, ಪ್ರಸನ್ನ ಹೆಗಡೆ, ಕಾರ್ತಿಕ್‌
ಅಮೈ, ಶಿವ ಸ್ಥಾವರಮಠ, ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next