Advertisement

ಪುರಾತನ ಹಿನ್ನೆಲೆಯ  ಬನಶಂಕರಿ ದೇಗುಲ

03:25 AM Oct 27, 2018 | |

ಸಾಗರ ತಾಲೂಕಿನ ಗೌತಮ ಪುರದಲ್ಲಿರುವ ಬನಶಂಕರಿ ದೇವಾಲಯ ಪುರಾತನ ಕಾಲಕ್ಕೆ ಸೇರಿದ್ದಾಗಿದೆ. ಇಲ್ಲಿ ಶಾರದಾಂಬಾ ಬನಶಂಕರಿ ಹಾಗೂ ದುರ್ಗ ಪರಮೇಶ್ವರಿಯ ಮೂರ್ತಿಗಳಿವೆ. ಈ ದೇವತೆಗಳ ಜೊತೆಗೆ ಮೂಲೆ ಗುತ್ಸಮ್ಮ ಎಂಬ ಸಹಾಯಕ ದೇವತೆಯೂ ಇದೆ.

Advertisement

ನಮ್ಮ ನಾಡಿನಲ್ಲಿ ಶಕ್ತಿ ದೇವತೆಗಳ ಆವಾಸ ಹಲವು ಕ್ಷೇತ್ರಗಳಲ್ಲಿದೆ.  ದೇವಿಯನ್ನು ಭಕ್ತಿಯಿಂದ ಆರಾಧಿಸುವ ಸಂಪ್ರದಾಯ ಬಹಳ ಹಿಂದಿನಿಂದ ಇದ್ದು, ಕ್ಷೇತ್ರದಿಂದ ಕ್ಷೇತ್ರಕ್ಕೆ ಸ್ಥಳ ಮಹಿಮೆ ವಿಭಿನ್ನವಾಗಿರುತ್ತದೆ. ಶಿವಮೊಗ್ಗ ಜಿಲ್ಲೆ ಸಾಗರ  ತಾಲೂಕಿನ ಗೌತಮಪುರದಲ್ಲಿ ಪ್ರಾಚೀನ ಕಾಲದ ಇತಿಹಾಸ ಮತ್ತು ವೈಭವ ಸಾರುವ ಹಲವು ಕುರುಹುಗಳಿವೆ. ಅವುಗಳಲ್ಲಿ ಶ್ರೀಬನಶಂಕರಿ ದೇಗುಲವೂ ಒಂದು.   ಪ್ರಾಚೀನ ಕಾಲದಲ್ಲಿ ಈ ದೇಗುಲ ನಂಬಿಕೆಗಳ ಪ್ರಕಾರ ಅದೆಷ್ಟೋ ವರ್ಷಗಳ ಹಿಂದೆ, ಈಗ ಇರುವ ಈ ಸ್ಥಳದಲ್ಲಿ ಒಂದು ವಿಪ್ರ ಕುಟುಂಬವಿತ್ತಂತೆ. ಈ ಕುಟುಂಬದಲ್ಲಿ  ಶಾರದಾಂಬಾ, ಬನಶಂಕರಿ ಹಾಗೂ ದುರ್ಗಾಪರಮೇಶ್ವರಿ- ಜನಿಸಿದರಂತೆ. ದೇವಿಯರು ಬೆಳೆಯುತ್ತಾ, ನಾನಾ ಬಗೆಯ ಪವಾಡಗಳನ್ನು ಮಾಡುತ್ತಾ ಗಮನ ಸೆಳೆಯಲಾರಂಭಿಸಿದರು. ಕೆಲವೊಮ್ಮೆ ಮಾಯಾರೂಪದಲ್ಲೂ, ಇನ್ನೊಮ್ಮೆ ಮನುಷ್ಯರೂಪದಲ್ಲೂ ಬದಲಾಗುತ್ತಿದ್ದರಂತೆ. ಆಹಾರ ವಿಹಾರಗಳನ್ನು ಗೌಪ್ಯವಾಗಿ ನಡೆಸುತ್ತಿದ್ದ ಇವರ ಸತ್ವ ಶಕ್ತಿ ಪರೀಕ್ಷೆಗೆ ಗ್ರಾಮದ ಕೆಲವು ಉಪಾಸಕರು ಯತ್ನಿಸಿದರಂತೆ. ಅಲ್ಲದೇ, ಈ ಸ್ಥಳದಲ್ಲಿ ಆಶೌಚಾದಿಗಳು ನಡೆದವಂತೆ. ಇಂಥವೇ ಕಾರಣಗಳಿಂದ, ಆ ದೇವತೆಗಳು ಇದೇ ಸ್ಥಳದಲ್ಲಿ ಮಣ್ಣಿನ ಮೂರ್ತಿಗಳಾಗಿ ಶಾಶ್ವತವಾಗಿ ನೆಲೆಯಾದರಂತೆ.  ಅವರೇ, ಅಂದಿನಿಂದ ಇಂದಿನವರೆಗೂ ಭಕ್ತರನ್ನು ಪೊರೆಯುತ್ತಿದ್ದಾರೆ ಎನ್ನುತ್ತದೆ ಸ್ಥಳ ಪುರಾಣ.

ಈ ಮೂರು ದೇವರ ಮೂರ್ತಿಗಳೂ ಅತ್ಯಾಕರ್ಷಕವಾಗಿದೆ. ಈ ದೇವತೆಗಳ ಜೊತೆಗೆ ಮೂಲೆ ಗುತ್ಯಮ್ಮ ಎಂಬ ಸಹಾಯಕ ದೇವತೆ ಸಹ ಇದೆ.  ಇದನ್ನು ಬಾಗಿಲಿನ ಮೂಲೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿಯಲ್ಲಿ ಸುಮಾರು 7 ಅಡಿ ಎತ್ತರದ ಮೂರು ಮಣ್ಣಿನ ಮೂರ್ತಿಗಳಿವೆ. ಅವುಗಳನ್ನು ಸರ್ವಾಲಂಕಾರಗಳಿಂದ ಶೋಭಿಸುವಂತೆ ಮಾಡಿ ಪೂಜಿಸಲಾಗುತ್ತಿದೆ. ಗ್ರಾಮದ ಪ್ರಮುಖ ದೇವರಾದ  ಶ್ರೀಗೌತಮೇಶ್ವರ ಮತ್ತು ಸೂರ್ಯನಾರಾಯಣ ದೇವಾಲಯ ತಲುಪಲು ಈ ದೇಗುಲದ ದಾರಿಯಲ್ಲೇ ಸಾಗಬೇಕು. ಈ ದೇವಾಲಯದ ಸುತ್ತ ಹಲವು ಕಲ್ಲಿನ ಮೂರ್ತಿಗಳು,ಹಳೆಯ ಶಿಥಿಲ ಗುಡಿಗಳು, ಪ್ರಾಚೀನ ಬಾವಿಗಳು , ಅರಳೀ ಕಟ್ಟೆ ಮುಂತಾದವು ಇವೆ. 

ಈ  ದೇವಾಲಯದಲ್ಲಿ ನವರಾತ್ರಿ ಉತ್ಸವ ವೈಭವದಿಂದ ಜರುಗುತ್ತದೆ. ಪ್ರತಿ ವರ್ಷ ದಸರಾ ಉತ್ಸವವೂ ನಡೆಯುತ್ತದೆ. ಇಲ್ಲಿ ಸಪ್ತಶತೀ ಪಾರಾಯಣ,ದೇವಿ ಭಾಗವತ,ಸಹಸ್ರನಾಮ ಪೂಜೆ,ಕುಂಕುಮಾರ್ಚನೆ ಹಾಗೂ ಮಹಾ ಮಂಗಳಾರತಿ ನಡೆಸಲಾಗುತ್ತಿದೆ.  ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಬಹು ದೂರದ ಊರುಗಳಿಂದ ಭಕ್ತರು ಅಗಮಿಸಿ ಹರಕೆ ಕಾಣಿಕೆ ಸಮರ್ಪಿಸುತ್ತಾರೆ. 

Advertisement

ವಿದ್ಯೆ, ಉದ್ಯೋಗ, ವಿವಾಹ, ಸಂತಾನಪ್ರಾಪ್ತಿ,ಆಸ್ತಿ ಕಲಹ ,ಮನೋ ಕ್ಲೇಶ ಇತ್ಯಾದಿ ನಿವಾರಣೆಗೆ ಭಕ್ತರು ಇಲ್ಲಿಗೆ ಬಂದು ದೇವಿಯ ಉಡಿ ತುಂಬುವುದು, ಮಾಂಗಲ್ಯ ಸರ ದಾನ, ಬೆಳ್ಳಿ-ಬಂಗಾರದ ಬಳೆ, ತಾಳಿ ಇತ್ಯಾದಿ ಸಮರ್ಪಣೆ ಮಾಡುತ್ತಾರೆ. 

 ಶಿವಮೊಗ್ಗ-ಜೋಗ ಮಾರ್ಗದಲ್ಲಿ ಆನಂದಪುರಂ ವೃತ್ತದಿಂದ ಶಿಕಾರಿಪುರ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಾಗಿದರೆ  8 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ಶಿವಮೊಗ್ಗದಿಂದ ಇಲ್ಲಿಗೆ 58 ಕಿ.ಮೀ ಆಗುತ್ತದೆ. 

ಎನ್‌.ಡಿ.ಹೆಗಡೆ ಆನಂದಪುರಂ 

Advertisement

Udayavani is now on Telegram. Click here to join our channel and stay updated with the latest news.

Next