ಬೆಂಗಳೂರು: ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಲ್ಲ. ಆ ವಿಚಾರವನ್ನು ಬಿಂಬಿಸಿದ ರೀತಿ ನನಗೆ ತುಂಬಾ ನೋವುಂಟು ಮಾಡಿದೆ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿ ಹಾಳಾಗಿದೆ ಎಂದು ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣದ ಆರೋಪದಲ್ಲಿ ಸಿಲುಕಿರುವ ಅನುಶ್ರೀ ಇಂದು ಬೆಳಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಕಳೆದೊಂದು ವಾರದಿಂದ ನಡೆಯುತ್ತಿರುವ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.
ಸೆಪ್ಟೆಂಬರ್ 24, 2020ರ ದಿನವನ್ನು ನನ್ನ ಜೀವನದ ಯಾವ ಘಟ್ಟದಲ್ಲೂ ಮತ್ತೆ ನೆನೆಪಿಸಿಕೊಳ್ಳುವುದಿಲ್ಲ. 12 ವರ್ಷಗಳ ಹಿಂದೆ ತಾನೊಂದು ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಾಗ ಮುಂದೊಂದು ದಿನ, ಅದೇ ನನ್ನ ಜೀವನದಲ್ಲಿ ಮುಳ್ಳಾಗುತ್ತದೆಯೆಂದು ಊಹಿಸಿರಲಿಲ್ಲ ಎಂದಿದ್ದಾರೆ
ನನ್ನನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳುತ್ತಿಲ್ಲ. ಸಿಸಿಬಿಯಿಂದ ನೊಟಿಸ್ ಬಂದಿರುವುದು ಬೇಜಾರಿಲ್ಲ. ಆದರೇ ಸುತ್ತಮುತ್ತಲಿನ ಅಂತೆಕಂತೆಗಳು ನೆಮ್ಮದಿಯನ್ನು ಹಾಳುಮಾಡುತ್ತಿದೆ. ಈ ವಿಚಾರಗಳನ್ನು ಪ್ರಚಾರ ಮಾಡುವ ಮುನ್ನ ನಮ್ಮ ಮನಸ್ಥಿತಿಯನ್ನೂ ಕೂಡ ಅರ್ಥಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ನನ್ನ ಹೆಸರಿಗೆ ಧಕ್ಕೆ ತರುವ ಕೆಲಸ ನಾನು ಯಾವತ್ತು ಮಾಡಿಲ್ಲ. ಮುಂದೆ ಮಾಡುವುದು ಇಲ್ಲ. ಕಷ್ಟ ಕಾಲದಲ್ಲೂ ಅನುಶ್ರೀ ಮೇಲೆ ನಂಬಿಕೆ ಇಟ್ಟು, ಜೊತೆ ನಿಂತ ಕನ್ನಡಿಗೆ ಧನ್ಯವಾದಗಳು ಕಣ್ಣೀರಿಟ್ಟಿದ್ದಾರೆ.