Advertisement
ಸಿನಿಮಾ ನೋಡಿ ಹೊರಬಂದಾಗ ಇಲ್ಲಿನ ಕೆಲವು ಅಂಶಗಳು ನಿಮ್ಮನ್ನು ಕಾಡುತ್ತವೆ ಹಾಗೂ ಅನೇಕ ಪ್ರಶ್ನೆಗಳನ್ನು ನಿಮ್ಮಲ್ಲಿ ಹುಟ್ಟುಹಾಕುವಂತೆ ಮಾಡಿರುವುದು “ಅನಂತು ವರ್ಸಸ್ ನುಸ್ರತ್’ನ ಹೆಗ್ಗಳಿಕೆ. “ಅನಂತು ವರ್ಸಸ್ ನುಸ್ರತ್’ ಯಾವುದೇ ಅಬ್ಬರವಿಲ್ಲದ, ಅನಾವಶ್ಯಕ ಅಂಶಗಳಿಂದ ಮುಕ್ತವಾದ ಒಂದು ಸಿನಿಮಾ. ಕಥೆಯೇ ಇಲ್ಲದೇ, ಸನ್ನಿವೇಶ, ಡೈಲಾಗ್‌ಗಳಲ್ಲೇ ಮುಗಿದು ಹೋಗುವ ಬಹುತೇಕ ಸಿನಿಮಾಗಳ ಮಧ್ಯೆ “ಅನಂತು’ ಒಂದು ಗಟ್ಟಿಕಥಾಹಂದರವಿರುವ ಸಿನಿಮಾವಾಗಿ ನಿಮಗೆ ಇಷ್ಟವಾಗುತ್ತದೆ.
Related Articles
Advertisement
ಮೊದಲೇ ಹೇಳಿದಂತೆ ಇದು ಯಾವುದೇ ಅಬ್ಬರವಿಲ್ಲದ, ಗಾಂಧಿನಗರದ ಸಿದ್ಧಸೂತ್ರಗಳಿಂದ ಮುಕ್ತವಾದ ಒಂದು ಸಿನಿಮಾ. ಇಲ್ಲಿ ನೀವು ಹೀರೋ ಹೊಡೆದಾಗ ಚಂಗನೇ ಹಾರುವ ಏಳೆಂಟು ಜನ ಇಲ್ಲ, ಮಾಸ್‌ಪ್ರಿಯರು ಶಿಳ್ಳೆ ಹಾಕುವಂತಹ ಡೈಲಾಗ್‌ಗಳಗೆ, ಕಾಮಿಡಿ ನಟರ ಹಾಸ್ಯ ಪ್ರಸಂಗಗಳಿಗೆ ಇಲ್ಲಿ ನೋ ಎಂಟ್ರಿ. ಗಂಭೀರ ಕಥೆಯನ್ನು ಅಷ್ಟೇ ಗಂಭೀರವಾಗಿ, ಮನಮುಟ್ಟುವಂತೆ ಕಟ್ಟಿಕೊಡುವ ನಿರ್ದೇಶಕರ ಉದ್ದೇಶ ಎದ್ದು ಕಾಣುತ್ತದೆ. ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಆದರೆ, ಅವೆಲ್ಲವನ್ನು ನಿರ್ದೇಶಕರು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಮತ್ತು ಕಥೆಯ ಆಶಯ ಬಿಟ್ಟು ಹೋಗಿಲ್ಲ.
ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳಲು ಕಮರ್ಷಿಯಲ್ ಅಂಶಗಳಿರುವ ಮಾಸ್ ಸಿನಿಮಾಗಳೇ ಬೇಕೆಂದು ನಂಬಿರುವ ಅನೇಕ ಹೊಸ ನಾಯಕ ನಟರ ನಡುವೆ ವಿನಯ್ ರಾಜಕುಮಾರ್ ಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಕಾರಣ ಅವರ ಆಯ್ಕೆ. “ಅನಂತು ವರ್ಸಸ್ ನುಸ್ರತ್’ನಂತಹ ಕಥೆಯೇ ಪ್ರಧಾನವಾಗಿರುವ, ಬಿಲ್ಡಪ್ ಅಂಶಗಳಿಂದ ಮುಕ್ತವಾಗಿರುವ ಸಿನಿಮಾಗಳನ್ನು ಒಪ್ಪಿಕೊಂಡು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ವಿನಯ್. ಭಾವನಾತ್ಮಕ ಸನ್ನಿವೇಶಗಳಲ್ಲಿ ವಿನಯ್ ಇನ್ನೊಂದಿಷ್ಟು ಪ್ರಯತ್ನಿಸಬೇಕಿದೆ ಅನ್ನೋದು ಬಿಟ್ಟರೆ ಇಡೀ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ನಾಯಕಿ ಲತಾ ಹೆಗಡೆ ಮಿತಭಾಷಿಣಿಯಾಗಿ ಇಷ್ಟವಾಗುತ್ತಾರೆ. ಅತಿಥಿ ಪಾತ್ರದಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್, ಬಿ.ಸುರೇಶ್, ದತ್ತಣ್ಣ, ಹರಿಣಿ, ರವಿಶಂಕರ್ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ 12ನೇ ಶತಮಾನದ ಕವಿ ಅಮೀರ್ ಖುಸ್ರೂ ಬರೆದ ಜನಪ್ರಿಯ “ಜೀಹಲೆ ಮಿಸ್ಕನ್’ ಘಜಲ್ ಅನ್ನು ಬಳಸಲಾಗಿದೆ. ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರ: ಅನಂತು ವರ್ಸಸ್ ನುಸ್ರತ್ನಿರ್ಮಾಣ: ಮಾಣಿಕ್ಯ ಪ್ರೊಡಕ್ಷನ್ಸ್
ನಿರ್ದೇಶನ: ಸುಧೀರ್ ಶ್ಯಾನುಭೋಗ್
ತಾರಾಗಣ: ವಿನಯ್ ರಾಜಕುಮಾರ್, ಲತಾ ಹೆಗಡೆ, ಪ್ರಜ್ವಲ್ ದೇವರಾಜ್, ಬಿ.ಸುರೇಶ್, ದತ್ತಣ್ಣ, ರವಿಶಂಕರ್ ಮತ್ತಿತರರು. * ರವಿಪ್ರಕಾಶ್ ರೈ