ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದ್ದರೆ ಹಾಗೂ ನಾನು ಮುಖ್ಯಮಂತ್ರಿಯಾಗಿ ಈ ಸ್ಥಾನದಲ್ಲಿ ಕುಳಿತಿದ್ದರೆ ಅದಕ್ಕೆಅನಂತ ಕುಮಾರ್ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಕೇಂದ್ರದ ಮಾಜಿ ಸಚಿವರಾದ ದಿವಂಗತ ಅನಂತ ಕುಮಾರ್ ಅವರ 61ನೇ ಜನ್ಮದಿನದ ಹಿನ್ನೆಲೆಯಲ್ಲಿ ಅನಂತ ನಮನ ಕಾರ್ಯಕ್ರಮದಡಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅನಂತ ಪಥ ಮಾಸಿಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನನ್ನ ಹಾಗೂ ಅನಂತ ಕುಮಾರ್ ಅವರ ಸ್ನೇಹ 30 ವರ್ಷಕ್ಕಿಂತ ಹಿಂದಿನದು. ಆಗೆಲ್ಲಾ ನಾನು, ಅನಂತ ಕುಮಾರ್, ತೇಜಸ್ವಿನಿ ಅನಂತ ಕುಮಾರ್ ಅವರು ಬಹಳ ಕಾಲ ಒಂದೇ ಮನೆಯಲ್ಲಿದ್ದೆವು. ಬೆಳಗ್ಗೆ ವಾಯುವಿಹಾರಕ್ಕೆ ಹೋಗುವಾಗ ನಮ್ಮ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದೆವು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು, ನಾವು ಭೇಟಿ ನೀಡಿದ ಹಳ್ಳಿ, ಊರುಗಳಿಲ್ಲ.ರಾಜ್ಯದಲ್ಲಿ ಪಕ್ಷಈ ಮಟ್ಟಕ್ಕೆಬೆಳೆಯಲು ಅನಂತ ಕುಮಾರ್ ಅವರ ನಿಸ್ವಾರ್ಥ ಸೇವೆ ಕಾರಣ. ಆ ದಿನಗಳನ್ನು, ಅವರ ಅಗಲಿಕೆಯನ್ನು ನೆನೆದರೆ ಕಣ್ಣೀರು ಬರುತ್ತದೆ ಎಂದು ಸ್ಮರಿಸಿದರು.
ಆರು ಬಾರಿ ಸಂಸದರಾಗಿ ನಾನಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅವರು ಮೇರು ನಾಯಕರಾಗಿದ್ದರು.ನಾವುಹಿಂದೆಲ್ಲಾ ಸಂಸತ್ತಿನಲ್ಲಿನ ಅವರ ಕಚೇರಿಗೆ ತೆರಳಿದಾಗ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಕಚೇರಿಗೆ ಕಳಿಸಿ ಸ್ಥಳದಲ್ಲೇ ಕೆಲಸ ಮಾಡಿಸಿಕೊಡುತ್ತಿದ್ದರು ಎಂದು ಗುಣಗಾನ ಮಾಡಿದರು. ಅನಂತ್ ಕುಮಾರ್ ಅವರ ನಾಯಕತ್ವ, ಜೀವನದಿಂದ ನಾವು ಕಲಿಯಬೇಕಾದ ಪಾಠ ಬಹಳಷ್ಟಿವೆ. ಪ್ರತಿಷ್ಠಾನವು ಬೆಂಗಳೂರಿನಲ್ಲಿ ನಾಯಕತ್ವ ತರಬೇತಿ ಸಂಸ್ಥೆ, ನೀತಿ- ನಿರೂಪಣಾ ಸಂಶೋಧನಾ ಕೇಂದ್ರ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರ, ಬೆಂಬಲವಿರಲಿದೆ. ಅನಂತ ಪಥ ಮಾಸಿಕ ಬಿಡುಗಡೆಗೊಳಿಸಿರುವುದು ಸಂತೋಷವಾಗಿದೆ. ನನ್ನ ಆತ್ಮೀಯ ಸ್ನೇಹಿತ ಅನಂತ ಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಎರಡು ವರ್ಷ ಕಳೆದಿದೆ. ಒಂದಲ್ಲ ಒಂದುಕಾರಣಕ್ಕೆ ನಿತ್ಯ ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಎಂದು ಹೇಳಿದರು.
ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ದಿವಂಗತ ಅನಂತ ಕುಮಾರ್ ಅವರು ನನ್ನ ರಾಜಕೀಯ ಗುರುಗಳು ಎಂದರೆ ತಪ್ಪಾಗಲಾರದು. ನನ್ನ ಕ್ಷಮತೆ ಗಮನಿಸಿ ವಕೀಲನಾಗಿದ್ದ ನನ್ನನ್ನು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದರು ಎಂದು ತಿಳಿಸಿದರು. ಸಚಿವ ಸಿ.ಟಿ.ರವಿ ಮಾತನಾಡಿ, ದೂರದೃಷ್ಟಿಯುಳ್ಳ ನಾಯಕರಾಗಿದ್ದ ಅನಂತಕುಮಾರ್ ಅವರ ಮೌಲ್ಯಗಳು, ನಾಯಕತ್ವದ ಶೈಲಿಯನ್ನು ಪ್ರೇರಣೆಯಾಗಿಟ್ಟುಕೊಂಡು ಉದಯೋನ್ಮುಖ ನಾಯಕತ್ವ ಬೆಳೆಸುವುದಕ್ಕಾಗಿ ಪ್ರತಿಷ್ಠಾನವು ಮಾರ್ಗದರ್ಶನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ, ಆನ್‌ಲೈನ್ ಮೂಲಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಹೃದ್ರೋಗತಜ್ಞೆ ವಿಜಯಲಕ್ಷ್ಮೀ ಬಾಳೇಕುಂದ್ರಿ, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಪಿ.ವಿ. ಕೃಷ್ಣಭಟ್ ಸೇರಿದಂತೆ ಹಲವು ಪಾಲ್ಗೊಳ್ಳಲಿದ್ದರು.