Advertisement

Anant Chaturdashi; ಅನಂತವ್ರತ ಅನಂತಕಲ್ಪನೆ…

01:14 AM Sep 17, 2024 | Team Udayavani |

ಅನಂತಪದ್ಮನಾಭ ವ್ರತಕ್ಕೆ ವಿವಿಧ ವ್ರತಗಳಲ್ಲಿ ಪ್ರಮುಖ ಸ್ಥಾನವಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು (ಸೆ. 17) ಕಲ್ಫೋಕ್ತ ಪೂಜೆ ಆಧಾರಿತ ಈ ವ್ರತ ನಡೆಯುತ್ತದೆ. ಚತುರ್ದಶಿಯಂದು ನಡೆಯುವ ಕಾರಣ ಅನಂತನ ಚತುರ್ದಶಿ ಎಂಬ ಹೆಸರೂ ಬಂದಿದೆ. ಅನಂತಪದ್ಮನಾಭನ ಅನುಗ್ರಹ ಯಾಚಿಸುವ ವ್ರತವಿದು.

Advertisement

ಕ್ಷೀರಸಾಗರದ ಮೇಲೆ ಶೇಷಶಾಯಿಯಾಗಿ ಶ್ರೀಮನ್ನಾರಾಯಣ ವಿಶ್ರಮಿಸಿಕೊಂಡಿರುವಾಗ ನಾಭಿಯಿಂದ ಹುಟ್ಟಿದ ಕಮಲದಲ್ಲಿ ಕುಳಿತ ಬ್ರಹ್ಮ ಜಗತ್ತಿನ ಸೃಷ್ಟಿ ಕಾರ್ಯದಲ್ಲಿ ಮಗ್ನರಾಗಿರುವ ಪರಿಕಲ್ಪನೆ ಜನಪ್ರಿಯವಾಗಿದೆ. ಕಮಲದಲ್ಲಿ ಬ್ರಹ್ಮ ಹೊರಬಂದ ಕಾರಣ ವಿಷ್ಣುವನ್ನು ಪದ್ಮನಾಭ ಎಂದು ಕರೆದರು. ಬ್ರಹ್ಮಾಂಡದ ಕಾಲ್ಪನಿಕ ರೂಪವಿದು. ಈ ಚಿತ್ರಣಕ್ಕೂ ಅನಂತಪದ್ಮನಾಭ ವ್ರತಕ್ಕೂ ಸಂಬಂಧವಿದೆ. ವ್ರತದಲ್ಲಿ ಏಳು ಹೆಡೆಯ ನಾಗನ ಬಿಂಬವನ್ನು ದರ್ಭೆಯಲ್ಲಿ ರಚಿಸಿ ವರ್ತುಲಾಕಾರದ (ಇರಿಕೆ) ಮೇಲೆ ಸಾಲಿಗ್ರಾಮ ಶಿಲೆಯನ್ನು ಇರಿಸಿ ಪೂಜಿಸಲಾಗುತ್ತದೆ.

ಬ್ರಹ್ಮಾಂಡದ ಏಳು ಲೋಕಗಳು ದೇಹದಲ್ಲಿರುವ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ ಈ ಏಳು ಚಕ್ರಗಳನ್ನು ಪ್ರತಿನಿಧಿಸುತ್ತವೆ. ಬಾಹ್ಯಪ್ರಪಂಚದ ಏಳು ಲೋಕಗಳು ಮಾನವನಲ್ಲಿ ಸೂಕ್ಷ್ಮ ರೂಪದಲ್ಲಿರುವ ಚಕ್ರಗಳಾಗಿವೆ. ಇಡೀ ಜಗತ್ತನ್ನೇ ಸೂಕ್ಷ್ಮವಾಗಿ ಪೂಜಿಸುವ ಕ್ರಮವನ್ನು ಈ ತೆರನಾಗಿ ಹೆಣೆದದ್ದು ಪೂರ್ವಿಕರ ವಿಶಾಲ ಬೌದ್ಧಿಕ ದೃಷ್ಟಿಕೋನವನ್ನು ಪುಷ್ಟೀಕರಿಸುತ್ತದೆ.

ದರ್ಭೆಯಲ್ಲಿ ರೂಪಿಸಿದ ನಾಗ ಶೇಷನ ಪ್ರತೀಕವಾದರೆ, ಸಾಲಿಗ್ರಾಮವು ವಿಷ್ಣುವಿನ ಅಂದರೆ ಅನಂತಪದ್ಮನಾಭನ ಪ್ರತೀಕ. ಅನಂತನೆಂದರೆ ಅಂತ್ಯವಿಲ್ಲದ್ದು, ಎಲ್ಲೆಲ್ಲಿಯೂ ಹರಡಿಕೊಂಡ ತಣ್ತೀ ಎಂಬ ಅರ್ಥವಿದೆ. ದಭೆì ಅಂದರೆ ಒಂದು ಬಗೆಯ ಹುಲ್ಲು. ಇದರಲ್ಲಿ ನಾಗನ ಪ್ರತೀಕವನ್ನು ರೂಪಿಸಲು ಕಲಾನೈಪುಣ್ಯದ ಅಗತ್ಯವಿದೆ. ಕೆಲವೇ ಜನರು ಇದರಲ್ಲಿ ಸಿದ್ಧಹಸ್ತರಾಗಿರುತ್ತಾರೆ. ದಭೆì ಈ ವ್ರತಕ್ಕಾಗಿ ಮಾತ್ರವಲ್ಲದೆ ಬಹುತೇಕ ಎಲ್ಲ ಧಾರ್ಮಿಕ ಚಟುವಟಿಕೆಗಳಿಗೆ ಇದರ ಅಗತ್ಯವಿದೆ. ಭಾದ್ರಪದ ಶುಕ್ಲ ಚತುರ್ದಶಿಯಂದು ಅನಂತ ಚತುರ್ದಶಿ, ಪೌರ್ಣಮಿ ತಿಥಿ ಬಂದರೆ ಅನಂತ ವ್ರತ ಆಚರಣೆಗೆ ಅತ್ಯಂತ ಪವಿತ್ರ.

ಮಹಾವಿಷ್ಣುವನ್ನು ಅನಂತ ರೂಪಿಯಾಗಿ ಪೂಜಿಸುವುದು ಈ ವ್ರತದ ವೈಶಿಷ್ಟé. ಚತುರ್ದಶಿ ಎಂದರೆ 14ನೆಯ ತಿಥಿ. ಇಲ್ಲಿ 14 ಗಂಟಿನ ದಾರವನ್ನು ಪೂಜಿಸಿ ತೋಳಿಗೆ ಕಟ್ಟಿಕೊಳ್ಳುವ ಕ್ರಮವಿದೆ. ದಾರವನ್ನು ಧರಿಸುವುದು ಸಂಕಲ್ಪದ ಒಂದು ಭಾಗ. ಚತುರ್ದಶಿಯ ಸಂಕೇತವಾಗಿ 14 ಭಕ್ಷ್ಯಗಳನ್ನು ಭಗವಂತನಿಗೆ ನಿವೇದಿಸುವ ಕ್ರಮ ಬೆಳೆದುಬಂದಿದೆ. ಹಬ್ಬದ ಹೆಸರಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ದೇವರಿಗೆ ನಿವೇದಿಸುವ ಹಿಂದೆ, ಮುಂದಿನ ದಿನಗಳಲ್ಲಿ ಭಗವದನುಗ್ರಹದಿಂದ ಆಹಾರದ ಕ್ಷಾಮ ಉಂಟಾಗಬಾರದೆಂಬ ಆಶಯ ಇದ್ದಿರಬಹುದು.

Advertisement

ಈ ವ್ರತದ ಉಲ್ಲೇಖ ಮಹಾಭಾರತದ ಅರಣ್ಯ ಪರ್ವದಲ್ಲಿದೆ. ಪಾಂಡವರು ಅರಣ್ಯದಲ್ಲಿರುವಾಗ ಶ್ರೀಕೃಷ್ಣನು ಧರ್ಮರಾಯನಿಗೆ ಈ ವ್ರತವನ್ನು ಆಚರಿಸಲು ಹೇಳುತ್ತಾನೆ. ವ್ರತದ ಆಚರಣೆಯಿಂದ ಸಂಪತ್ತು, ದಾಂಪತ್ಯ ಜೀವನದ ಏಕತೆ, ಸಮಸ್ಯಾಪರಿಹಾರ ಇತ್ಯಾದಿ ಫ‌ಲವನ್ನು ವ್ರತದ ಫ‌ಲಭಾಗದಲ್ಲಿ ತಿಳಿಸಲಾಗಿದೆ.

ಕಾಡಿನಲ್ಲಿದ್ದ ಪಾಂಡವರಿಗೆ ಕಾಡಿಂದ ಪಾರಾಗಲು ವ್ರತಾಚರಣೆ ಸಲಹೆ ಹೇಳಿದಂತೆ ಸಂಸಾರವೆಂಬ ಕಾಡಿನಲ್ಲಿದ್ದವರಿಗೆ ಪಾರಾಗಲೂ ಈ ವ್ರತ ದಾರಿ ಎಂಬುದು ಆಧ್ಯಾತ್ಮಿಕ ಅನುಸಂಧಾನ. ಪರಮಾತ್ಮನ ಅನುಗ್ರಹ ಯಾಚನೆ ಜತೆಗೆ ಸಂಕಷ್ಟ ಪರಿಹಾರವೂ ಗುರಿಯಾಗಿರುವುದರಿಂದಲೇ ಶ್ರೀಕೃಷ್ಣ, ಧರ್ಮರಾಯನಿಗೆ ವ್ರತವನ್ನು ಆಚರಿಸಲು ಸಲಹೆ ಕೊಡುತ್ತಾನೆ. ಇದರಿಂದಾಗಿ ಪಾಂಡವರು ಯಶಸ್ವಿಯೂ ಆದರು. ಮಹಾಭಾರತಕ್ಕೆ ವಿಜಯ ಗ್ರಂಥವೆಂಬ ಹೆಸರು ಇರುವಂತೆ ಪಾಂಡವರು ಗೆಲುವು ಸಾಧಿಸುವ ದಿನ ವಿಜಯದಶಮಿ ಎನಿಸಿದೆ. ಜನಕ, ಸಗರ, ದಿಲೀಪ, ಹರಿಶ್ಚಂದ್ರ ಮೊದಲಾದ ರಾಜರ್ಷಿಗಳೂ ಈ ವ್ರತವನ್ನು ಆಚರಿಸಿ ಮನೋಭಿಲಾಷೆಯನ್ನು ಈಡೇರಿಸಿಕೊಂಡಿರುವುದು ಪುರಾಣಗಳಲ್ಲಿ ಕಂಡುಬರುತ್ತದೆ.

ಅನಂತಪದ್ಮನಾಭ ರೂಪವು ಭಗವಂತನ ಮೂಲರೂಪವಾಗಿದೆ. ಇದರ ವರ್ಣನೆ ಶ್ರೀಮದ್ಭಾಗವತ ಪುರಾಣದಲ್ಲಿದೆ. ಉಳಿದೆಲ್ಲ ಅವತಾರರೂಪಗಳು ಬಂದಿರುವುದು ಅನಂತರ. ಈ ಹಿನ್ನೆಲೆಯಲ್ಲಿಯೂ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಅನಂತಪದ್ಮನಾಭ, ಅನಂತ ಹೆಸರಿನಿಂದ ಕೂಡಿದ ಎಲ್ಲ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ವೆಂಕಟರಮಣ ದೇವಸ್ಥಾನಗಳಲ್ಲಿ ಅನಂತವ್ರತವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವಾಮೀಜಿಯವರು ಕೈಗೊಂಡ ಚಾತುರ್ಮಾಸ ವ್ರತವು ಕೊನೆಗೊಳ್ಳುವುದೂ ಇದೇ ದಿನ. ಗಣೇಶ ಚತುರ್ಥಿಯಂದು ಪೂಜೆಗೊಂಡ ವಿಗ್ರಹವನ್ನು ವಿಸರ್ಜಿಸುವ ಕೊನೆಯ ದಿನವೂ ಇದೇ ಆಗಿದೆ. ಗಣೇಶ ಹಬ್ಬಕ್ಕೆ ಹೆಸರಾದ ಮುಂಬಯಿ, ಪುಣೆಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜಿಸುವುದು ಇದೇ ದಿನ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next