ಮಂಗಳೂರು: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಜು. 14ರಂದು ನಿಧನರಾದ ಭಾರತ್ ಸಮೂಹ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಅನಂತ್ ಜಿ. ಪೈ ಅವರ ಪಾರ್ಥಿವ ಶರೀರವನ್ನು ಸೋಮವಾರ ವಿಮಾನ ಮೂಲಕ ಮಂಗಳೂರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ವ್ಯವಹಾರ ಸಮ್ಮೇಳನದಲ್ಲಿ ಭಾಗವಹಿಸಲು ಇಂದೋರ್‌ಗೆ ತೆರಳಿದ್ದ ಅವರು ಅಲ್ಲಿ ವಾಸ್ತವ್ಯ ಮಾಡಿದ್ದ ಹೊಟೇಲ್‌ನ ಕೊಠಡಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಮೃತ ದೇಹವನ್ನು ಹೊತ್ತ ವಿಶೇಷ ವಿಮಾನ ತಡ ರಾತ್ರಿ ಇಂದೋರ್‌ನಿಂದ ಹೊರಟು ಸೋಮವಾರ ಮುಂಜಾನೆ 4 ಗಂಟೆ ವೇಳೆಗೆ ಮಂಗಳೂರು ತಲುಪಿತ್ತು.
ಅಲ್ಲಿಂದ ಮೃತ ದೇಹವನ್ನು ಕದ್ರಿಯಲ್ಲಿರುವ ಮನೆಗೆ ಕೊಂಡೊಯ್ದು ಬೆಳಗ್ಗೆ ಕುಟುಂಬದ ಸದಸ್ಯರಿಂದ ಅಂತಿಮ ಗೌರವ ಸಲ್ಲಿಸಲಾಯಿತು. ಬಳಿಕ 12 ಗಂಟೆಗೆ ಕದ್ರಿಯಲ್ಲಿರುವ ಭಾರತ್ ಸಮೂಹ ಸಂಸ್ಥೆಯ ಆಡಳಿತ ಕಚೇರಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.
ಭಾರತ್ ಗ್ರೂಪ್‌ನ ವಿವಿಧ ಸಂಸ್ಥೆಗಳ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಸಾವಿರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಸಾರ್ವಜನಿಕರು ಅಗಲಿದ ಉದ್ಯಮಿಗೆ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ ಬಳಿಕ ಪಾರ್ಥಿವ ಶರೀರವನ್ನು ನಗರದ ಬೋಳೂರಿನ ರುದ್ರಭೂಮಿಗೆ ಕೊಂಡೊಯ್ದು ಅಂತ್ಯ ವಿಧಿಗಳನ್ನು ನೆರವೇರಿಸಲಾಯಿತು.
ಗಣ್ಯರಿಂದ ಶ್ರದ್ಧಾಂಜಲಿ: ಮಣಿಪಾಲದ ಪೈ ಕುಟುಂಬದ ಪರವಾಗಿ ಟಿ. ಸತೀಶ್ ಯು. ಪೈ, ಸಂಧ್ಯಾ ಎಸ್. ಪೈ, ಟಿ. ಗೌತಮ್ ಪೈ, ಅಶೋಕ್ ಪೈ, ಎಚ್. ಶಾಂತಾರಾಮ್ ಅವರು ಸೋಮವಾರ ಬೆಳಗ್ಗೆ ಕದ್ರಿಯಲ್ಲಿರುವ ದಿ| ಅನಂತ್ ಜಿ. ಪೈ ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.