Advertisement

ಸರಕಾರಕ್ಕೆ ಅನಿರೀಕ್ಷಿತ ಸವಾಲು; ಮನೆಯಲ್ಲೇ ಇದ್ದಾರೆ ಶೇ. 90 ಪೀಡಿತರು!

01:37 AM Jan 20, 2022 | Team Udayavani |

ಬೆಂಗಳೂರು: ಕೊರೊನಾ 3ನೇ ಅಲೆ ತಜ್ಞರು ಮತ್ತು ಸರಕಾರದ ಲೆಕ್ಕಾಚಾರ ವನ್ನೇ ತಲೆಕೆಳಗಾಗಿಸಿದೆ. ಶೇ. 90ರಷ್ಟು ಸೋಂಕು ಪೀಡಿತರು ಹೋಂ ಐಸೋಲೇಶನ್‌ ಆಗಿರುವುದೇ ಇದಕ್ಕೆ ಕಾರಣ. ಆಸ್ಪತ್ರೆ, ಹಾಸಿಗೆ, ಆಮ್ಲಜನಕ, ಐಸಿಯು ಹೆಚ್ಚಳ ಮಾಡಿಕೊಂಡು ಸಜ್ಜಾಗಿದ್ದ ಸರಕಾರಕ್ಕೆ ಈಗ ಔಷಧ ಕಿಟ್‌ಗಳನ್ನು ಮನೆ ಮನೆಗೆ ತಲುಪಿಸುವ ಹೊಸ ಸವಾಲು ಎದುರಾಗಿದೆ.

Advertisement

3ನೇ ಅಲೆಯು ಮಕ್ಕಳನ್ನು ಹೆಚ್ಚು ಕಾಡಲಿದೆ ಎಂದು ಅಂದಾಜಿಸಲಾಗಿತ್ತು. 2ನೇ ಅಲೆಯಲ್ಲಿ ಆಮ್ಲಜನಕ ಕೊರತೆ ಯಿಂದ ಸಂಭವಿಸಿದ್ದ ಸಾವುನೋವು ಪುನರಾವರ್ತನೆ ಆಗಬಾರದು ಎಂದು ಆ ಮೂಲಸೌಕರ್ಯ ಕಲ್ಪಿಸುವತ್ತ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ 3ನೇ ಅಲೆ ಈ ಲೆಕ್ಕಾಚಾರವನ್ನು ಬುಡಮೇಲಾಗಿಸಿದೆ. ಸದ್ಯ ಸೋಂಕಿನ ಲಕ್ಷಣಗಳು ಸೌಮ್ಯ ರೂಪ ದಲ್ಲಿರುವ ಕಾರಣ ಸೋಂಕುಪೀಡಿತರನ್ನು ಹೋಂ ಐಸೋಲೇಶನ್‌ ಮಾಡಿ ಕಿಟ್‌ ವಿತರಿಸಬೇಕಿದ್ದು, ಇದು ಸರಕಾರಕ್ಕೆ ಸವಾಲಾಗಿದೆ.

ಕಿಟ್‌, ಸಲಹೆ ಮಾತ್ರ ಸಾಕು
ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು, ಆಸ್ಪತ್ರೆಗೆ ಬರುವ ಅಗತ್ಯವಿಲ್ಲ ಎಂದು ಸರಕಾರ ಹೇಳಿದೆ. ಆದರೆ ಹೋಂ ಐಸೋಲೇಶನ್‌ ಆಗಿರುವವರಿಗೆ ಸರಕಾರ ಔಷಧ ಕಿಟ್‌ ಮತ್ತು ವೈದ್ಯರ ಸಲಹೆ ಒದಗಿಸಬೇಕಾಗಿದೆ.

2.60 ಲಕ್ಷ ಕಿಟ್‌ ಅಗತ್ಯ
ಪ್ರಸ್ತುತ ರಾಜ್ಯದಲ್ಲಿ 2,67,650 ಸೋಂಕು ಪೀಡಿತರಿದ್ದು, ಸುಮಾರು 2.62 ಲಕ್ಷ ಮಂದಿ ಹೋಂ ಐಸೋಲೇಶನ್‌ ನಲ್ಲಿದ್ದಾರೆ. ಆಯಾ ಜಿಲ್ಲಾಡಳಿತಕ್ಕೆ ಔಷಧ ಕಿಟ್‌ ವಿತರಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ಇದುವರೆಗೆ 55 ಸಾವಿರ ಕಿಟ್‌ ವಿತರಿಸಲಾಗಿದ್ದು, ಇನ್ನೂ 90 ಸಾವಿರ ಕಿಟ್‌ ಲಭ್ಯ ಇವೆ. ಮೊದಲ ಮತ್ತು 2ನೇ ಹಂತದ ನಗರಗಳಿಗೆ ಈ ಕಿಟ್‌ ತಲುಪಬಹುದು. ಆದರೆ ಗ್ರಾಮೀಣ ಭಾಗಗಳ ಮನೆ ಬಾಗಿಲಿಗೆ ಹೋಗುವುದು ಸದ್ಯ ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೀತ, ಜ್ವರದವರಿಗೂ ಸಲಹೆ ಅಗತ್ಯ
ಕೊರೊನಾದಿಂದ ಹೋಂ ಐಸೋಲೇಶನ್‌ನಲ್ಲಿ ಇರುವವರಿಗೆ ಔಷಧ ಕಿಟ್‌ ನೀಡಲು ಸರಕಾರ ಮುಂದಾಗಿದೆ. ಆದರೆ ಇತ್ತೀಚೆಗೆ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಜ್ವರ, ಕೆಮ್ಮು, ನೆಗಡಿ, ಮೈಕೈ-ತಲೆನೋವು ಮತ್ತಿತರ ಸಮಸ್ಯೆಗಳಿಂದ ಮನೆಯಲ್ಲೇ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಅವರಿಗೂ ವೈದ್ಯರ ಸಲಹೆ, ಔಷಧ ಅಗತ್ಯ ಇದೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

Advertisement

ಆಸ್ಪತ್ರೆಯಲ್ಲಿ ಬರೀ
4,795 ಮಂದಿ!
ರಾಜ್ಯದಲ್ಲಿ ಜ. 18ರ ವರೆಗೆ ಸರಕಾರಿ ಆಸ್ಪತ್ರೆ ಗಳಲ್ಲಿ ಕೊರೊನಾ ಸೋಂಕಿನಿಂದ 2,761 ಮಂದಿ ದಾಖಲಾಗಿದ್ದಾರೆ. ಅವರಲ್ಲಿ 1,610 ಮಂದಿ ಸಾಮಾನ್ಯ ಬೆಡ್‌, 871 ಮಂದಿ ಆಮ್ಲಜನಕ ಬೆಡ್‌, 180 ಮಂದಿ ಐಸಿಯು, 100 ಮಂದಿ ಐಸಿಯು ವೆಂಟಿಲೇಟರ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 2,034 ಸೋಂಕು ಪೀಡಿತರಿದ್ದು, ಇವರಲ್ಲಿ 1,841 ಮಂದಿ ಸಾಮಾನ್ಯ ಬೆಡ್‌, 64 ಮಂದಿ ಆಮ್ಲಜನಕ ಬೆಡ್‌, 117 ಮಂದಿ ಐಸಿಯು ಬೆಡ್‌, 12 ಮಂದಿ ಐಸಿಯು ವೆಂಟಿಲೇಟರ್‌ ಬೆಡ್‌ನ‌ಲ್ಲಿದ್ದಾರೆ.

ಕರ್ಫ್ಯೂ ತೆರವು ನಾಳೆ ನಿರ್ಧಾರ
ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶುಕ್ರವಾರದ ಸಭೆಯಲ್ಲಿ ಸಂಪೂರ್ಣ ಚಿತ್ರಣ ಸಿಗಲಿದ್ದು, ಬಳಿಕ ತೀರ್ಮಾನಿಸಲಾಗುವುದು ಎಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next