Advertisement

ಜೆಲ್ಲಿ ಹಾಕಿ 8 ವರ್ಷ, ಡಾಂಬಾರು ಯಾವಾಗ?

03:20 PM Jul 04, 2023 | Team Udayavani |

ಗುಡಿಬಂಡೆ: ಮಂಡಿಕಲ್ಲು ಹೋಬಳಿಯ ಉದಗಿರಿ ನಲ್ಲಪ್ಪನಹಳ್ಳಿಗೆ ಹೋಗುವ ರಸ್ತೆಗೆ 8 ವರ್ಷಗಳ ಹಿಂದೆ ಡಾಂಬಾರು ಹಾಕುವ ಉದ್ದೇಶದಿಂದ ಜೆಲ್ಲಿ ಹಾಕಿದ್ದು ಅಷ್ಟೇ ಹೊರತು ಇಲ್ಲಿಯವರೆಗೂ ಸಹ ಡಾಂಬಾರು ಹಾಕದೇ ಇರುವುದರಿಂದ ಓಡಾಡಲು ತೊಂದರೆಯಾಗುತ್ತಿದ್ದು, ಕೂಡಲೇ ಡಾಂಬಾರು ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಉದಗಿರಿನಲ್ಲಪ್ಪನಹಳ್ಳಿಯಲ್ಲಿ 85ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಪ್ರತಿ ದಿನ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ಗರ್ಭಿಣಿ ಯರು ಹಾಗೂ ವೃದ್ಧರು, ಕಚೇರಿ ಕೆಲಸ ಕಾರ್ಯಗಳಿಗೆ, ಆಸ್ಪತ್ರೆಗೆ ಗುಡಿಬಂಡೆ ಹಾಗೂ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಲು ಗ್ರಾಮಕ್ಕೆ ಇರುವ ಏಕೈಕ ರಸ್ತೆಯಾಗಿದ್ದು, ಇರುವ ಒಂದು ರಸ್ತೆಗೆ ಕೆಲ ವರ್ಷಗಳಿಂದ ಡಾಂಬಾರು ಸಹ ಹಾಕಿರುವುದಿಲ್ಲ.

ಹರಸಾಹಸ: 8 ವರ್ಷಗಳ ಹಿಂದೆ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು, ಡಾಂಬಾರು ಹಾಕುತ್ತೇವೆ ಎಂದು ರಸ್ತೆಗೆ ಜೆಲ್ಲಿ ಸುರಿದಿದ್ದರೆ, ಈವರೆಗೂ ಅಧಿಕಾರಿಗಳು ಮಾತ್ರ ರಸ್ತೆ ಡಾಂಬಾರೀಕರಣಕ್ಕೆ ಮುಂದಾಗದ ಕಾರಣ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿ ಹರಸಾಹಸ ಪಡಬೇಕಾದ ಸ್ಥಿತಿಯಲ್ಲಿದ್ದಾರೆ.

ಹಿಂಜರಿಕೆ: ಗ್ರಾಮಕ್ಕೆ ಇರುವ ಏಕೈಕ ರಸ್ತೆಯಲ್ಲಿ ಅಧಿಕಾರಿಗಳು ಜೆಲ್ಲಿ ಹಾಕಿ ಹಾಗೆ ಬಿಟ್ಟಿರುವ ಕಾರಣ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಸಾರಿಗೆ ಬಸ್‌ ಸಹ ಇಲ್ಲದಿರುವುದರಿಂದ ಆಟೋಗಳಲ್ಲೇ ಸಾರ್ವಜನಿಕರು ಪ್ರಯಾಣಿಸಬೇಕಾಗಿದೆ. ಜೆಲ್ಲಿ ಕಲ್ಲುಗಳ ಮೇಲೆ ಆಟೋಗಳು ಸಂಚರಿಸಲು ಹರಸಾಹಸ ಪಡಬೇಕಾದ ಹಿನ್ನೆಲೆ ಆಟೋ ಚಾಲಕರು ಸಹ ಈ ಗ್ರಾಮಕ್ಕೆ ಬರಲು ಹಿಂಜರಿಯುತ್ತಿದ್ದಾರೆ.

ಹಿಂದಿನ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಡಾ.ಕೆ.ಸುಧಾಕರ್‌ ಅವರಲ್ಲಿ ಈ ಗ್ರಾಮಕ್ಕೆ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಹಲವು ಬಾರಿ ಸಭೆ ಸಮಾರಂಭಗಳಲ್ಲಿ ಮನವಿ ಮಾಡಿಕೊಂಡಿದ್ದು, ಭರವಸೆ ನೀಡುತ್ತಲೆ ಬಂದರೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ ಅವರು ಈ ಗ್ರಾಮಕ್ಕೆ ರಸ್ತೆಗೆ ಡಾಂಬಾರು ಹಾಕಿಸಿಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

Advertisement

ಗ್ರಾಮದ ರಸ್ತೆಯಲ್ಲಿ ಜೆಲ್ಲಿಗಳು ಎದ್ದಿರುವುದರಿಂದ ದ್ವಿಚಕ್ರ ವಾಹನ, ಆಟೋಗಳು, ವಾಹನಗಳು ಹಾಗೂ ನಡೆದುಕೊಂಡು ಓಡಾಡಲು ತುಂಬಾ ತೊಂದರೆಯಾಗಿದ್ದು, ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ರಸ್ತೆ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ● ಪವನ್‌, ಉದಗಿರಿನಲ್ಲಪ್ಪನಹಳ್ಳಿ ಯುವಕ

Advertisement

Udayavani is now on Telegram. Click here to join our channel and stay updated with the latest news.

Next