ಮಾನ್ವಿ: ಸಾರ್ವಜನಿಕರು, ಪುರಾತತ್ವ ಇಲಾಖೆ ಹಾಗೂ ತಾಲೂಕು ಆಡಳಿತದ ಅವಕೃಪೆಯಿಂದ ಕಪ್ಪು ಶಾಸನವೊಂದು ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದೆ.
ಈ ಶಾಸನವು 5 ಅಡಿ ಎತ್ತರ ಒಂದೂವರೆ ಅಡಿ ಅಗಲ ಇದ್ದು ಚೌಕಾಕೃತಿ ಹೊಂದಿದೆ. ಶಾಸನದ ಮೂರೂ ಕಡೆಯಲ್ಲಿ ಕನ್ನಡ ಲಿಪಿ ಬರೆಯಲಾಗಿದೆ.
ಈ ಶಾಸನವು ಅಪ್ರಕಟಿತ ಶಾಸನವಾಗಿದೆ. ಅಶುದ್ಧ ಕನ್ನಡ ಭಾಷೆಯಲ್ಲಿದ್ದು 64 ಸಾಲುಗಳಿಂದ ಕೂಡಿದೆ. ಆರಂಭದಲ್ಲಿ ಶಾಸನದ ಕಾಲ ತಿಳಿಸಲಾಗಿದ್ದು ಶಾಲ್ಪದಿನಾಮ ಸಂವತ್ಸರದ ಕಾರ್ತಿಕ ಬಹುಳ ಪಂಚಮಿಯ ಆದಿತ್ಯವಾರದಂದು ಕ್ರಿ.ಶ.1751ರಿಂದ 1761ರ ಕಾಲಘಟ್ಟದಲ್ಲಿ ಸಲಾಬತ್ ಖಾನನೆಂಬ ಆಸಫ್‌ಜಾಹಿ ವಂಶದ ಸುಲ್ತಾನನನ್ನು ಹೈದ್ರಾಬಾದ್ ಪ್ರಾಂತ್ಯವನ್ನು ಆಳ್ವಿಕೆ ಮಾಡುತ್ತಿರುವಾಗ ಮೊಸಗೆ (ಮಸ್ಕಿ) ಸೀಮೆಯ ಮಾನುವೆ (ಮಾನ್ವಿ) ಸ್ಥಳದಲ್ಲಿ ಕೆರೆ ನಿರ್ಮಾಣ ಸಮಯದಲ್ಲಿ ಈ ಶಾಸನ ಬರೆಸಲಾಗಿದೆ.
ಶಾಸನದ ಎರಡನೇ ಬದಿಯಲ್ಲಿ ಮಾನುವೆ(ಮಾನ್ವಿ) ಸ್ಥಳದ ಬೀದಿ ಮೆರವಣಿಗೆ ಸಂದರ್ಭದಲ್ಲಿ ಬೀದಿ ಮೆರವಣಿಗೆಗೆ ತೊಡಕು ಇದ್ದುದರಿಂದ ಮಸೀದಿ ಸ್ಥಳಕ್ಕೆ ಒಡಂಬಡಿಕೆ ಪ್ರಕಾರ ಸ್ಥಳ ಬಿಟ್ಟು ಬಂದಿದ್ದರಿಂದ ಸಾಲಗುಂದ ಮಹಾನಾಡಿನ ಹಟಗಾರ, ಗೌಡ ಪ್ರಜೆಗಳಲ್ಲಿ ವಿನಂತಿಸಿಕೊಂಡು ಸ್ಥಳವನ್ನು ಮಾನ್ಯ ಮಾಡಿಸಿಕೊಂಡಿದ್ದ ಬಗ್ಗೆ ತಿಳಿಸುತ್ತದೆ. ಇದು ಸೂರ್ಯ-ಚಂದ್ರ ಇರುವವರೆಗೆ ಚಾಲ್ತಿಯಲ್ಲಿರುತ್ತದೆ ಹಾಗೂ ತಪ್ಪಿದ್ದಲ್ಲಿ ದಂಡ ತೆರಬೇಕಾಗುತ್ತದೆ ಎಂದು ತಿಳಿಸುತ್ತದೆ. ಮೂರನೇ ಬದಿಯಲ್ಲಿ ಅಂದಿನ ದಿನಗಳಲ್ಲಿ ಇದ್ದ ಊರಿನ ಪ್ರಮುಖರ ಹೆಸರುಗಳು, ಸಾಕ್ಷಿಗಳ ಹೆಸರುಗಳನ್ನು ಬರೆಯಲಾಗಿದೆ ಎನ್ನುತ್ತಾರೆ ಸಂಶೋಧಕ ಚನ್ನಬಸಪ್ಪ ಮಲ್ಕಂದಿನ್ನಿ.
ಪ್ರಾಚೀನ ಇತಿಹಾಸ ತಿಳಿಸುವ ಅನೇಕ ಪುರಾತನ ಕಲ್ಯಾಣಿಗಳು, ಶಾಸನಗಳು, ವೀರಗಲ್ಲುಗಳು, ಮಾಸ್ತಿಗಲ್ಲುಗಳು ಇದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಿ ಉಳಿಸಬೇಕಾಗಿದೆ.