Advertisement

ಕರಾವಳಿ ಕಾವಲು ಪಡೆ: ಮರಳಿನಲ್ಲೊಂದು ಸಾವಯವ ಕೃಷಿತೋಟ!

10:08 PM Dec 22, 2022 | Team Udayavani |

ಉಡುಪಿ: ಕಡಲ ತಡಿಯ ರಕ್ಷಣೆ ಮಾಡುವ ಕರಾವಳಿ ಕಾವಲು ಪಡೆಯ ಮಲ್ಪೆ ಕಚೇರಿಯ ಎದುರು ನಿರ್ಮಿಸಿರುವ ಸಾವಯವ ಕೃಷಿ ತೋಟ ಎಲ್ಲರ ಗಮನ ಸೆಳೆಯುತ್ತಿದೆ. ಸಂಪೂರ್ಣ ಮರಳಿನಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಕೃಷಿತೋಟ ಮಾಡಿರುವ ಕಲ್ಪನೆಯೇ ವಿಭಿನ್ನವಾಗಿದೆ.

Advertisement

ಕರಾವಳಿ ಕಾವಲು ಪಡೆಯ ಅಧೀಕ್ಷಕರಿಗೆ ಈ ಕಚೇರಿಯ ಎದುರು ಇದ್ದ ಜಾಗದಲ್ಲಿ ಸಾವಯವ ತೋಟ ನಿರ್ಮಿಸುವ ಕಲ್ಪನೆ ಬಂದಿದ್ದೇ ತಡ. ಎಲ್ಲರಿಗೂ ಅಚ್ಚರಿಯಾಗಿತ್ತಂತೆ. ಕಾರಣ ಸುತ್ತಲೂ ಆವೃತವಾಗಿರುವ ಮರಳು. ಮರಳಿನಲ್ಲಿ ತೆಂಗುಬಿಟ್ಟರೆ ಬೇರೆ ಏನೂ ಬೆಳೆಯಲು ಸಾಧ್ಯವಿಲ್ಲವೆಂಬ ಕಲ್ಪನೆ!

ಲೋಡುಗಟ್ಟಲೆ ಮಣ್ಣು
ತೋಟ ನಿರ್ಮಿಸಿರುವ ಸುಮಾರು 50 ಸೆಂಟ್ಸ್‌ನಷ್ಟು ಜಾಗಕ್ಕೆ ಲೋಡುಗಟ್ಟಲೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಬಳಿಕ ಗಿಡಗಳನ್ನು ನೆಟ್ಟು ಫ‌ಲ ನೀಡಿರುವುದು ಖುಷಿಯ ಸಂಗತಿಯಾಗಿದೆ. ಈಗಾಗಲೇ ಇಲ್ಲಿ ತೆಂಗು,ಮಾವು, ಹಲಸು, ಸಂಪಿಗೆ, ಬಾಳೆಗಿಡ, ಕಬ್ಬು, ರಾಮಕೃಷ್ಣ ಫ‌ಲ ಸಹಿತ ಹಲವಾರು ಬಗೆಯ ತರಕಾರಿಗಳು, ಹಣ್ಣುಹಂಪಲುಗಳ ಗಿಡಗಳಿವೆ.

ಮಾದರಿ ಕಿರು ಗೋಶಾಲೆ
ಲಭ್ಯವಿರುವ ಸ್ಥಳವನ್ನು ಸದುಪಯೋಗಿಸಿಕೊಂಡು ಮಾದರಿ ಕಿರು ಗೋಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಕೃಷ್ಣ, ರಾಧಾ, ಗೀತಾ ಹೆಸರಿನ ಮೂರು ಗೋವುಗಳಿವೆ. ಇವುಗಳ ಗೋಮೂತ್ರ, ಗೋಮಯಗಳನ್ನು ದಾಸ್ತಾನು ಮಾಡಿ ಸಾವಯವ ಗೊಬ್ಬರದ ರೀತಿಯಲ್ಲಿ ಸಾವಯವ ಕೃಷಿ ತೋಟಕ್ಕೆ ಬಳಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಸುಗಳನ್ನು ಸಾಕುವ ಬಗ್ಗೆಯೂ ಚಿಂತನೆ ಹೊಂದಲಾಗಿದೆ.

ಸಿಬಂದಿಗಳಿಂದಲೇ ನಿರ್ವಹಣೆ
ಗೋಶಾಲೆ, ಸಾವಯವ ಕೃಷಿ ತೋಟದ ನಿರ್ವಹಣೆಯನ್ನು ಸ್ವತಃ ಇಲ್ಲಿನ ಸಿಬಂದಿಗಳೇ ನಿರ್ವಹಿಸುತ್ತಿದ್ದಾರೆ. ಕೆಲಸದ ನಡುವೆ ಬಿಡುವಿದ್ದಾಗ ಪರಿಸರ ಕಾಳಜಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಹೆಡ್‌ಕಾನ್‌ಸ್ಟೆಬಲ್‌ ಆಗಿರುವ ಸಂತೋಷ್‌ ಶೆಟ್ಟಿ ಅವರು ಈ ಬಗ್ಗೆ ವಿಶೇಷ ಆಸಕ್ತಿ ತೋರಿಸಿದ್ದಾರೆ. 7 ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು “ಮೈಸೂರು ಒಡೆಯರ ಕಾಲದಲ್ಲಿ ಪೊಲೀಸ್‌ ವ್ಯವಸ್ಥೆ ಅಧ್ಯಯನ’ದ ಬಗ್ಗೆ ಪಿಎಚ್‌.ಡಿ.ಪಡೆದುಕೊಂಡಿದ್ದಾರೆ. ಸಾವಯವ ಕೃಷಿ ತೋಟದ ಈ ಮಾದರಿಯನ್ನು ಬೇರೆ ಬೇರೆ ಯುನಿಟ್‌ ಕೇಂದ್ರ ಕಚೇರಿಗಳಿಗೆ ತೋರಿಸಿ ಅಲ್ಲಿಯೂ ಹೀಗಿಯೇ ಮಾಡಬಹುದೆನ್ನುವ ಕಾಳಜಿ ಇವರದ್ದು.

Advertisement

ಗೊಬ್ಬರವಾಗಿ ಬಳಕೆ
ಪರಿಸರಕ್ಕೂ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾವಯವ ಕೃಷಿ ತೋಟ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಕಿರು ಗೋಶಾಲೆ ನಿರ್ಮಾಣ ಮಾಡಲಾಗಿದ್ದು, ಇದನ್ನೇ ಗೊಬ್ಬರವಾಗಿ ಗಿಡಗಳಿಗೆ ಬಳಕೆ ಮಾಡ ಲಾಗುತ್ತಿದೆ. ಮುಂದಿನ ದಿನ ಮತ್ತಷ್ಟು ಗಿಡ ಬೆಳೆಸಲು ಉದ್ದೇಶಿಸಲಾಗಿದೆ.
-ಅಬ್ದುಲ್‌ ಅಹದ್‌, ವರಿಷ್ಠಾಧಿಕಾರಿಗಳು, ಕರಾವಳಿ ಕಾವಲು ಪೊಲೀಸ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next