ನವದೆಹಲಿ: ಇನ್ನು ಮುಂದೆ ಸಂಸತ್ ಸದಸ್ಯರು ಸದನದಲ್ಲಿ ನಡೆಯುವ ಚರ್ಚೆಗಳನ್ನು ಕನ್ನಡ ಸೇರಿದಂತೆ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ಆಲಿಸಬಹುದು. ಇಂಗ್ಲಿಷ್ ಅಥವಾ ಹಿಂದಿ ಭಾಷೆಯ ಮೇಲೆ ಅವಲಂಬಿಸಬೇಕಾಗಿಲ್ಲ!
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಸ್ತಾಪಿಸಿರುವ ಈ ಪರಿಕಲ್ಪನೆ ಅನುಷ್ಠಾನಗೊಂಡರಷ್ಟೇ ಇದು ಸಾಧ್ಯ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹೊಸ ಸಂಸತ್ ಭವನದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಭಾರತೀಯ ಭಾಷೆಗಳ ಉತ್ತೇಜನದ ಜೊತೆಗೆ ಸಂಸದರಿಗೂ ಅನುಕೂಲವಾಗಲಿದೆ.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಬರುವ ಎಲ್ಲ 22 ಭಾಷೆಗಳಲ್ಲೂ ತತ್‌ಕ್ಷಣದಲ್ಲೇ ದ್ವಿಮುಖ ವ್ಯಾಖ್ಯಾನ ಸೌಲಭ್ಯ(ಏಕಕಾಲಕ್ಕೆ ಭಾಷಾಂತರ ಪ್ರಕ್ರಿಯೆ)ವನ್ನು ಕಲ್ಪಿಸುವ ಕುರಿತು ಜೂ.28ರಂದು ಲೋಕಸಭಾ ಕಾರ್ಯಾಲಯವು ಸುತ್ತೋಲೆಯೊಂದನ್ನು ಹೊರಡಿಸಿದೆ. ಜತೆಗೆ, ಆರಂಭದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಇದನ್ನು ಪರೀಕ್ಷಿಸುವಂತೆ ಉದ್ಯೋಗಿಗಳಿಗೆ ಆಹ್ವಾನವನ್ನೂ ನೀಡಿದೆ.
ಹೇಗಿರಲಿದೆ ಹೊಸ ವ್ಯವಸ್ಥೆ?:
ಹೊಸ ವ್ಯವಸ್ಥೆಯಲ್ಲಿ, ಬಜೆಟ್ ಮಂಡನೆ, ವಿಧೇಯಕಗಳ ಕುರಿತು ಚರ್ಚೆ ಅಥವಾ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಮುಂತಾದ ಪ್ರಮುಖ ಕಲಾಪಗಳನ್ನು ಭಾಷಾಂತರಕಾರರು ಆ ಕ್ಷಣದಲ್ಲೇ ಎಲ್ಲ 22 ಭಾಷೆಗಳಿಗೂ ಭಾಷಾಂತರಿಸುತ್ತಾರೆ. ಈ ಸೌಲಭ್ಯವು ಸದನದಲ್ಲಿರುವ ಎಲ್ಲ ಸಂಸದರು, ಗ್ಯಾಲರಿಯಲ್ಲಿರುವ ನಾಗರಿಕರು ಮತ್ತು ಪತ್ರಕರ್ತರಿಗೂ ಲಭ್ಯವಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಇರುವ ವ್ಯವಸ್ಥೆಯ ಪ್ರಕಾರ, ಯಾವುದೇ ಸದಸ್ಯ ಹಿಂದಿ ಅಥವಾ ಇಂಗ್ಲಿಷ್ ಹೊರತಾದ ಭಾಷೆಯಲ್ಲಿ ಮಾತನಾಡಲು ಬಯಸಿದರೆ, ಅವರು ಮುಂಚಿತವಾಗಿಯೇ ಈ ಕುರಿತು ಸಭಾಧ್ಯಕ್ಷರಿಂಗೆ ನೋಟಿಸ್ ನೀಡಬೇಕು. ಅದರಂತೆ, ಕಾರ್ಯಾಲಯವು ಆ ಸದಸ್ಯನಿಗೆ ಸೂಕ್ತ ಭಾಷಾಂತರಕಾರನನ್ನು ನಿಯೋಜಿಸುತ್ತದೆ.