Advertisement

ನೂರಾರು ಜನರಿಗೆ ಬೆಳಕು ನೀಡಿದ ನೇತ್ರನಿಧಿ

09:42 AM Nov 08, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಥಮ ನೇತ್ರನಿಧಿ (ಆಯ್‌ ಬ್ಯಾಂಕ್‌) ಇಲ್ಲಿನ ಹೈದ್ರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಸಾರ್ವಜನಿಕ ಬೋಧನಾ ಆಸ್ಪತ್ರೆಯಲ್ಲಿ 12 ವರ್ಷಗಳ ಹಿಂದೆಯೇ ಆರಂಭವಾಗಿದ್ದು, ನೂರಾರು ಜನರಿಗೆ ಬೆಳಕು ನೀಡಿದೆ.

Advertisement

ಬಸವೇಶ್ವರ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 150 ಮೃತರ ನೇತ್ರಗಳನ್ನು ದಾನ ಪಡೆದು ಬೇರೆಯವರಿಗೆ ಅಳವಡಿಕೆ ಮಾಡಿದ್ದರೆ, 250ಕ್ಕೂ ಅಧಿಕ ಜನರಿಗೆ ಬೇರೆ ಕಡೆಯಲ್ಲಿ ದಾನ ಮಾಡಿದ್ದ ನೇತ್ರಗಳನ್ನು ಕಸಿ ಮಾಡಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಒಟ್ಟಾರೆ 400ಕ್ಕೂ ಅಧಿಕ ಜನರಿಗೆ ಬೆಳಕಿನ ಭಾಗ್ಯ ಕಲ್ಪಿಸಿದಂತಾಗಿದೆ.

ಡಾ|ಮಾಣಿಕ ಪೂಜಾರಿ ನೇತೃತ್ವ ಹಾಗೂ ಮುಖ್ಯಸ್ಥರೊಂದಿಗೆ ನೇತ್ರನಿಧಿ ಆರಂಭವಾಗಿದ್ದು, ಮೊದ ಮೊದಲು ಜನ ನೇತ್ರದಾನ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ ಜಾಗೃತಿ ನಂತರ ಜನರು ನೇತ್ರದಾನ ಮಾಡಲು ಮನಸ್ಸು ಮಾಡುತ್ತಿದ್ದಾರೆ. 2800 ಜನರ ನೋಂದಣಿ: ಬಸವೇಶ್ವರ ಕಣ್ಣಿನ ವಿಭಾಗದಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡಲು ಈಗ 2500 ಜನರು ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ ನೇತ್ರದಾನ ಮಾಡುವ ಬಗ್ಗೆ ಹೆಸರು ನೋಂದಾಯಿಸದಿದ್ದರೂ ವ್ಯಕ್ತಿಯೊಬ್ಬ ಮೃತಪಟ್ಟ ವ್ಯಕ್ತಿಯ ವಾರಸುದಾರರು ನೇತ್ರಾಲಯಕ್ಕೆ ಕರೆ ಮಾಡಿ ನೇತ್ರದಾನಕ್ಕೆ ಅವಕಾಶ ಕಲ್ಪಿಸಬಹುದು. ಒಟ್ಟಾರೆ ಮೃತಪಟ್ಟ ವ್ಯಕ್ತಿಯಿಂದ ಆರು ಗಂಟೆಯೊಳಗೆ ನೇತ್ರದಾನ ಪಡೆಯಬೇಕು.

ಜಿಮ್ಸ್‌ನಲ್ಲಿ ವಾರದೊಳಗೆ ಶುರು

ಇಲ್ಲಿನ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜೀಮ್ಸ್‌)ಯಲ್ಲಿ ನೇತ್ರದಾನ ಹಾಗೂ ನೇತ್ರ ಕಸಿ ಮಾಡುವ ಅತ್ಯಾಧುನಿಕ ವ್ಯವಸ್ಥೆಯುಳ್ಳ ಘಟಕ ವಾರದೊಳಗೆ ಶುರುವಾಗಲಿದೆ. ಎರಡು ವರ್ಷಗಳ ಹಿಂದೆಯೇ ನೇತ್ರದಾನ ಪಡೆಯುವ ಹಾಗೂ ಕಸಿ ಮಾಡುವ ಜತೆಗೆ ಹೆಸರು ನೋಂದಾಯಿಸುವ ಕುರಿತು ರಾಜ್ಯ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಘಟಕ ಆರಂಭವಾಗಿರಲಿಲ್ಲ. ಆದರೆ ನೇತ್ರದಾನ ಹಾಗೂ ಕಸಿ ಮಾಡುವ ಘಟಕ ವಾರದೊಳಗೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕಿ ಡಾ| ಕವಿತಾ ಪಾಟೀಲ, ಜಿಮ್ಸ್‌ನ ನೇತ್ರದಾನ ವಿಭಾಗದ ಮುಖ್ಯಸ್ಥೆ ಡಾ| ರಾಜೇಶ್ವರಿ ಮಹಾಂತಗೋಳ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಸಿಆರ್ ಪಿಎಫ್ ಯೋಧ: ನಾಲ್ವರು ಸಾವು, ಮೂವರಿಗೆ ಗಾಯ

ಜಿಮ್ಸ್‌ನಲ್ಲಿ ನೇತ್ರದಾನ ಪಡೆಯುವ ಹಾಗೂ ಕಸಿ ಮಾಡುವ ಅತ್ಯಾಧುನಿಕ ಘಟಕ ಶುರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇಷ್ಟರಲ್ಲೇ ಘಟಕ ಆರಂಭವಾಗಲಿದ್ದು, ನೇತ್ರದಾನ ಮಾಡುವವರಿಗೆ ಹಾಗೂ ಕಣ್ಣು ಪಡೆಯುವವರಿಗೆ ಆಸರೆ ಕಲ್ಪಿಸಲಾಗುವುದು. ಕಣ್ಣು ವಿಭಾಗದಲ್ಲಿ ಸ್ನಾತಕೋತ್ತರ ಕೋರ್ಸ್‌ಗೂ ಅನುಮತಿ ಸಿಕ್ಕಿದೆ. -ಡಾ| ಕವಿತಾ ಪಾಟೀಲ, ನಿರ್ದೇಶಕಿ, ಜೀಮ್ಸ್‌

ಮೂರು ದಿನದ ಹಿಂದೆ ಮೃತಪಟ್ಟ ವ್ಯಕ್ತಿಯ ವಾರಸುದಾರರು ಕರೆ ಮಾಡಿ ನೇತ್ರದಾನಕ್ಕೆ ಕೈ ಜೋಡಿಸಿದ್ದಾರೆ. ಈಗ ದಿನಾಲು ಒಬ್ಬರಾದರೂ ಕರೆ ಮಾಡಿ ನೇತ್ರದಾನ ಬಗ್ಗೆ ವಿಚಾರಿಸುತ್ತಿದ್ದಾರೆ. ವಾರದಲ್ಲಿ ನಾಲ್ಕು ಜನ ಹೆಸರು ನೋಂದಾಯಿಸಿದ್ದಾರೆ. -ಡಾ|ವೀರೇಶ ಕೊರವಾರ, ಮುಖ್ಯಸ್ಥರು, ನೇತ್ರದಾನ ವಿಭಾಗದ ಮುಖ್ಯಸ್ಥರು, ಬಸವೇಶ್ವರ ಆಸ್ಪತ್ರೆ

12 ವರ್ಷಗಳ ಹಿಂದೆ ಸಂಸ್ಥೆಯವರು ಹಾಗೂ ತಾವು ಹೆಚ್ಚಿನ ಮುತುವರ್ಜಿ ವಹಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮವಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ನೇತ್ರನಿಧಿ ಹಾಗೂ ಕಸಿ ಮಾಡುವ ಘಟಕ ಆರಂಭಿಸಲಾಯಿತು. ಒಂದಿನವೂ ಬಂದ್‌ ಆಗದಂತೆ ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬರಲಾಗಿದೆ. ಆರಂಭದಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. -ಡಾ| ಮಾಣಿಕ ಪೂಜಾರ, ನಿವೃತ್ತ ಮುಖ್ಯಸ್ಥರು, ಬಸವೇಶ್ವರ ಆಸ್ಪತ್ರೆ

ನೇತ್ರನಿಧಿ ವಿಭಾಗ ವೈದ್ಯ ಸಾಹಿತ್ಯ ಪರಿಷತ್‌ ನಿಂದ ದೇಹದಾನ ಬಳಗ ರಚಿಸಿಕೊಂಡು ದೇಹದಾನ ಮಹತ್ವ ತಿಳಿ ಹೇಳಲಾಗುತ್ತಿದೆ. ಜತೆಗೆ ನೇತ್ರದಾನ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯಾಂಪ್‌ಗ್ಳನ್ನು ನಡೆಸಲಾಗುತ್ತಿದೆ. -ಎಸ್‌.ಎಸ್‌. ಹಿರೇಮಠ, ಜಿಲ್ಲಾ ವೈದ್ಯ

ಕನ್ನಡ ಸಾಹಿತ್ಯ ಪರಿಷತ್‌ಜಿಮ್ಸ್‌ನಲ್ಲಿ ನೇತ್ರದಾನ ಹಾಗೂ ಕಸಿ ಮಾಡುವ ಘಟಕ ಸನ್ನದ್ಧವಾಗಿದೆ. ಈಗಾಗಲೇ ನೇತ್ರದಾನ ಕುರಿತು ಹಲವಾರು ಶಿಬಿರ ನಡೆಸಲಾಗಿದೆ. ಹೆಸರು ನೋಂದಾಯಿಸಲು ಹಾಗೂ ಮಾಹಿತಿ ನೀಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. -ಡಾ|ರಾಜೇಶ್ವರಿ ಮಹಾಂತಗೋಳ, ಮುಖ್ಯಸ್ಥರು, ನೇತ್ರ ವಿಭಾಗ ಜಿಮ್ಸ್‌

ನೇತ್ರದಾನ ಬಗ್ಗೆ ನಮ್ಮ ಭಾಗದಲ್ಲಿ ಇನ್ನೂ ಜಾಗೃತಿ ಬರುವುದು ಅಗತ್ಯವಿದೆ. ನೇತ್ರದಾನಕ್ಕೆ ಹೆಸರು ನೋಂದಾಯಿಸಿದವರು, ಬೇರೆ ಜಾಗದಲ್ಲೂ ಮೃತಪಟ್ಟರೆ ಅದೇ ಸ್ಥಳದಲ್ಲೇ ದಾನ ಮಾಡುವ ವ್ಯವಸ್ಥೆಯಿದೆ. ನೋಂದಣಿ ಪತ್ರದ ಮಾಹಿತಿ ನೀಡಿದರೆ ಸಾಕು ಹೆಸರು ನೋಂದಾಯಿಸದಿದ್ದರೂ ಮೃತರ ವಾರಸುದಾರರು ನೇತ್ರದಾನ ಬಗ್ಗೆ ಮಾಹಿತಿ ತಿಳಿಸಿದರೆ ಆಸ್ಪತ್ರೆ ವೈದ್ಯರ ತಂಡ ತೆರಳಿ ನೇತ್ರ ಪಡೆಯುತ್ತದೆ. -ಡಾ|ಶರಣಬಸವಪ್ಪ ಹರವಾಳ, ಮಾಜಿ ಡೀನ್‌ ಬಸವೇಶ್ವರ ಆಸ್ಪತ್ರೆ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next