ನವದೆಹಲಿ: ದೇಶದ ಲಡಾಖ್ ಗಡಿಯ ವಾಸ್ತವ ನಿಯಂತ್ರಣ ರೇಖೆ ಪ್ರದೇಶದಲ್ಲಿ ಚೀನಾ ಜತೆಗೆ ಸಂಘರ್ಷ ಮುಂದುವರೆದಿರುವ ನಡುವೆಯೇ ಕೇಂದ್ರ ವಿತ್ತ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಮಂಗಳವಾರ(ಫೆ.09, 2021) ಭಾರತದಲ್ಲಿ ಪ್ರಸ್ತುತ 80 ಚೀನಾ ಕಂಪನಿಗಳು ಸಕ್ರಿಯವಾಗಿ ವ್ಯವಹಾರ ನಡೆಸುತ್ತಿರುವುದಾಗಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಶಿಕ್ಷಕ ಸ್ಥಳದಲ್ಲಿಯೇ ಸಾವು
ಭಾರತದಲ್ಲಿ ಪ್ರಸ್ತುತ 92 ಚೀನಾ ಕಂಪನಿಗಳು ನೋಂದಣಿ ಮಾಡಿಕೊಂಡಿವೆ ಎಂದು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 40 ಮಂದಿ ಭಾರತೀಯ ಯೋಧರು ಹುತಾತ್ಮರಾದ ನಂತರ ಚೀನಾ ಕಂಪನಿಗಳಿಗೆ ನಿರ್ಬಂಧ ವಿಧಿಸಿದ ನಂತರವೂ ಎಷ್ಟು ಕಂಪನಿಗಳು ದೇಶದಲ್ಲಿ ವ್ಯವಹಾರ ನಡೆಸುತ್ತಿವೆ ಎಂಬ ಪ್ರಶ್ನೆಗೆ ಠಾಕೂರ್ ಈ ಉತ್ತರ ನೀಡಿದ್ದಾರೆ.
ಈ ಹಿಂದೆ ಚೀನಾ ಕಂಪನಿಗಳಿಗೆ ವಿಧಿಸಿದ ಕಾನೂನಿನಂತೆಯೇ ಈಗಾಗಲೇ ಸೂಕ್ತ ಕಾಯ್ದೆ ಸಿದ್ದವಾಗಿದ್ದು, ಎಲ್ಲಾ ಚೀನಾ ಕಂಪನಿಗಳಿಗೂ ಇದು ಅನ್ವಯವಾಗಲಿದೆ. ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪ್ರಿಯ ಟಿಕ್ ಟಾಕ್ ಸೇರಿದಂತೆ ಕನಿಷ್ಠ 59 ಚೀನಾ ಮೊಬೈಲ್ ಆಪ್ ಗಳನ್ನು ನಿಷೇಧಿಸಿದೆ.
ಅಲ್ಲದೇ ಭಾರತದಲ್ಲಿನ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸುತ್ತಿರುವುದಾಗಿ ಠಾಕೂರ್ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಇದರಲ್ಲಿ ರಕ್ಷಣೆ, ಬಾಹ್ಯಾಕಾಶ ಮತ್ತು ಆಟೋಮಿಕ್ ಎನರ್ಜಿ ಕ್ಷೇತ್ರ ಒಳಗೊಂಡಿಲ್ಲ ಎಂದು ತಿಳಿಸಿದರು.