Advertisement

ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರ ತನಿಖೆ

09:38 AM Jun 20, 2018 | |

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಪಂಗಳಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಲಾಗುವುದು ಎಂದು ಶಾಸಕ ಎಸ್‌.ವಿ. ರಾಮಚಂದ್ರ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನಡೆದಷ್ಟು ಅವ್ಯವಹಾರ ಬೇರೆ ಯಾವ ತಾಲೂಕಿನಲ್ಲೂ ನಡೆದಿಲ್ಲ. ತಾಲೂಕಿನಲ್ಲಿರುವ 22 ಗ್ರಾಪಂಗಳಲ್ಲಿ 8 ಗ್ರಾಪಂಗಳ ಮೇಲೆ ದೂರು ದಾಖಲಾಗಿದೆ. ಇದಕ್ಕೆ ಕಾರಣವೇನು? ಎನ್‌ಆರ್‌ ಜಿಯ ಶೇ. 40 ಹಣ ಬಂತೆಂದರೆ ಸಾಕು, ತಾಲೂಕಿನಲ್ಲಿ ರಾತ್ರಿ 1 ಗಂಟೆಯವರೆಗೂ ಬಾರ್‌ ಮತ್ತು ಡಾಬಾಗಳು ತೆರೆದಿರುತ್ತವೆ. ಇದು ಮುಂದುವರಿಯಬಾರದು ಎಂದರು.

ಬೋಗಸ್‌ ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಎನ್‌ಆರ್‌ಜಿವೈ ಅನುದಾನ ಜಿಲ್ಲೆಯಲ್ಲಿ ಹೆಚ್ಚು ತಮ್ಮ ತಾಲೂಕಿಗೆ ಬರುತ್ತಿದೆ. ಸರ್ಕಾರದ ಹಣವನ್ನು ಅನಾವಶ್ಯಕವಾಗಿ ಖರ್ಚು ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡಿ ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಪಶು ಸಂಗೋಪನೆ ಇಲಾಖೆಯಲ್ಲಿ ಪಶುಭಾಗ್ಯ ಯೋಜನೆಯಲ್ಲಿ ಉಳ್ಳವರಿಗೆ ಐದಾರು ಹಸುಗಳನ್ನು ಕೊಟ್ಟಿರುವ ಮಾಹಿತಿ ಬಂದಿದೆ. ವಿತರಣೆ ಮಾಡಿದವರ ವಿವರ ಕೊಡಬೇಕು. ಒಂದು ವೇಳೆ ಅವ್ಯವಹಾರ ನಡೆದಿದ್ದಾದರೆ ಅದಕ್ಕೆ ಅವರೇ ಉತ್ತರಿಸಬೇಕು ಎಂದರು.

ತಾಲೂಕು ಕಚೇರಿಯಲ್ಲಿ ನಡೆಯುವಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ದೂರದಿಂದ ಬರುವ ವೃದ್ಧರು, ಸಾರ್ವಜನಿಕರು, ವಿದ್ಯಾರ್ಥಿಗಳು ಇಲಾಖೆ ಸಿಬ್ಬಂದಿಗಳಿಗೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವಂತಾಗಿದೆ. ಅಂತ ಸಿಬ್ಬಂದಿಗಳನ್ನು ಹೊರ ಹಾಕಿ ಕಟ್ಟು ನಿಟ್ಟಾಗಿ ಕ್ರಮಕೈಗೊಳ್ಳಬೇಕು ಅಧಿಕಾರಿಗಳಿಗೆ ಸೂಚಿಸಿದರು.

Advertisement

ತಾಲೂಕಿನಲ್ಲಿ ಆಡಳಿತ ಕುಸಿದು ಹೋಗಿದ್ದು, ಇಂತಹ ವಾತಾವರಣವನ್ನು ನಾನು ಎಂದೂ ನೋಡಿಲ್ಲ. ಅಧಿಕಾರಿಗಳು ಮಾಡುವ ಆಟವನ್ನು ನೋಡಿಕೊಂಡು ಹಿಂದಿನ ಶಾಸಕರಂತೆ ನಾನು ಸುಮ್ಮನಿರುವುದಿಲ್ಲ. ಹಿಂದಿನದ್ದನ್ನು ತಿದ್ದುಕೊಂಡು ಜನರಿಗೆ ಸ್ಪಂದಿಸಿ ಕೆಲಸ ಮಾಡೋದಾರೆ ಮಾಡಿ, ಇಲ್ಲದಿದ್ದರೆ ಕ್ಷೇತ್ರ ಬಿಟ್ಟು ಹೋಗಿ ಎಂದು           ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನಲ್ಲಿ 100ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಕೆಲವು ಉದ್ಘಾಟನೆಗೂ ಮುನ್ನವೇ ತುಕ್ಕು ಹಿಡಿದು ಮೂಲೆ ಸೇರಿವೆ. ಮೊದಲು ಅವುಗಳನ್ನು ಸರಿಪಡಿಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೂಡಲೇ ಟ್ಯಾಂಕರ್‌ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದರು.

ನಾನು ಶಾಸಕನಾಗಿ 1 ವರ್ಷ ಇರುತ್ತೇನೋ 5 ವರ್ಷ ಇರುತ್ತೇನೋ ಗೊತ್ತಿಲ್ಲ. ನಾನು ಇರುವವರೆಗೂ ಅಧಿಕಾರಿಗಳು ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಪಟ್ಟಣದಲ್ಲಿ ಪಟ್ಟಣ ಪಂಚಾಯತ್‌ ನೂತನ ಕಚೇರಿಗೆ ಅನುದಾನ ಬಿಡುಗಡೆಯಾಗಿದ್ದರೂ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸದಿದ್ದರೆ ಬಂದ ಅನುದಾನ ವಾಪಸ್‌ ಹೋಗುತ್ತದೆ. ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು. 

ಲೋಕೋಪಯೋಗಿ ಇಲಾಖೆ ಅಧಿಕಾರಿ ರವಿಚಂದ್ರ ವರದಿ ಮಂಡಿಸುತ್ತಿದ್ದಂತೆ ಶಾಸಕ ಎಸ್‌.ವಿ.ರಾಮಚಂದ್ರ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಕೂಡಲೇ ಕಾಮಗಾರಿ ಚುರುಕುಗೊಳಿಸಿ ಪಟ್ಟಣದ ಕೆರೆ ಏರಿ ಅಗಲೀಕರಣ ಮಾಡಿದ್ದು, ಅಲ್ಲಿ ಸರಿಯಾದ ತಡೆಗೋಡೆ ನಿರ್ಮಾಣ ಮಾಡಿಲ್ಲ. ಅಲ್ಲಿ ಬಿಡ್ಜ್ ಅವಶ್ಯಕತೆ ಹೆಚ್ಚಾಗಿದ್ದು, ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರವಿಚಂದ್ರ ಅವರಿಗೆ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ರ ವರದಿ ಮಂಡಿಸಿ, ತಾಲೂಕಿನಲ್ಲಿ 1,121 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಪ್ರಸಕ್ತ ಸಾಲಿನ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಶಾಲೆಗೆ ಸರಬರಾಜು ಮಾಡಲಾಗಿದೆ, ಶೀಘ್ರವೇ ಸೈಕಲ್‌ಗ‌ಳನ್ನು ವಿತರಿಸಲಾಗುವುದು. ಮಳೆಗಾಲವಾಗಿದ್ದು, ಸಾಕಷ್ಟು ಶಾಲೆಗಳು ಶಿಥಿಲಗೊಂಡಿವೆ. ಅವುಗಳಿಗೆ ಅನುದಾನ ನೀಡಿ ಕೊಠಡಿಗಳ ನಿರ್ಮಾಣವಾಗಬೇಕಾಗಿದೆ.

ತಾಲೂಕಿನಲ್ಲಿ 60 ಶಿಕ್ಷಕರ ಕೊರತೆ ಇದ್ದು, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 5 ಶಾಲೆಗಳ ಫಲಿತಾಂಶ ಶೇ.
100 ಬಂದಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಶಾಸಕ ರಾಮಚಂದ್ರ ತಾಲೂಕಿನಲ್ಲಿ ಎಷ್ಟು ಶಾಲೆಗಳು  ಶಿಥಿಲಗೊಂಡಿವೆ ಎಂದು ಪಟ್ಟಿ ಮಾಡಿಕೊಡಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ. ಶೀಘ್ರವೇ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬೇಡಿ. ಈ ಹಿಂದೆ ನಾನು ಶಾಸಕನಾಗಿದ್ದಾಗ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಥಮ ಸ್ಥಾನದಲ್ಲಿತ್ತು. ಆದರೆ ಈಗ 5ನೇ ಸ್ಥಾನಕ್ಕೆ ಇಳಿದಿದೆ.
ವಿದ್ಯಾರ್ಥಿಗಳಿಗೆ ಕ್ರೀಡಾಕೂಡ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಬೆಸ್ಕಂ ಇಲಾಖೆ ಎಇಇ ಸುಧಾಮಣಿ ವರದಿ ಮಂಡಿಸುತ್ತಿದ್ದಂತೆ ತಾಲೂಕಿನಲ್ಲಿ ರೈತರ ಬಳಿ ನಿಮ್ಮ ಸಿಬ್ಬಂದಿಗಳು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ದೂರು ಕೇಳಿಬರುತ್ತಿದೆ. ಮೊದಲು ಅದನ್ನು ಸರಿಮಾಡಿಕೊಳ್ಳಿ ಎಂದು ಶಾಸಕರು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ನಾಗರಾಜ್‌ ವರದಿ ಮಂಡಿಸಿದರು. ಬಳಿಕ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಕಟ್ಟಡ, ಸೌಲಭ್ಯ ನೀಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಸ್ವತ್ಛತೆ ಕಾಪಾಡುತ್ತಿಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ನೀವು ಏನು ಮಾಡುತ್ತಿದ್ದೀರಿ ಪ್ರಶ್ನಿಸಿ ಮೊದಲು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ತಾಲೂಕಿನಲ್ಲಿ ಅಧಿಕಾರಿಗಳು ಬಂದ ಜನರಿಗೆ ಪ್ರೀತಿಯಿಂದ ಕೂರಿಸಿ ತಮ್ಮ ಕೈಲಾದ ಕೆಲಸ ಮಾಡಿಕೊಡಬೇಕು. ಸುಮ್ಮನೇ ಅವರನ್ನು ಸತಾಯಿಸಿ ಹಣ ಕೀಳುವುದರ ಕುರಿತು ದೂರು ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ತಹಶೀಲ್ದಾರ್‌ ಶ್ರೀಧರ್‌ಮೂರ್ತಿ, ತಾಪಂ ಇಒ ಜಾನಕಿರಾಮ್‌, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next