Advertisement

ಕ್ರೀಡಾಭ್ಯಾಸ ಶಿಕ್ಷಣದ ಅವಿಭಾಜ್ಯ ಅಂಗ

09:35 PM Oct 23, 2019 | Lakshmi GovindaRaju |

ಹೊಸಕೋಟೆ: ಕ್ರೀಡಾಭ್ಯಾಸ ಶಿಕ್ಷಣದ ಅವಿಭಾಜ್ಯ ಅಂಗ. ಮಾನಸಿಕ ಮತ್ತು ದೈಹಕ, ಸಮತೋಲನ ಬೆಳವಣಿಗೆಗೆ ಅತ್ಯವಶ್ಯ ಎಂದು ಗ್ರಾಮಾಂತರ ಜಿಪಂ ಸದಸ್ಯ ವಿ. ಪ್ರಸಾದ್‌ ಹೇಳಿದರು. ನಗರದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

Advertisement

ವಿದ್ಯಾರ್ಥಿಗಳು ಶಾರೀರಿಕ, ಸದೃಢರಾಗಿ ಬೆಳವಣಿಗೆ ಹೊಂದಲು ಕ್ರೀಡಾಭ್ಯಾಸ ಪರಿಣಾಮಕಾರಿ ಸಾಧನವಾಗಿದೆ. ಗ್ರಾಮಾಂತರ ಜಿಲ್ಲೆ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ, ರಾಜ್ಯದಲ್ಲೇ ವಿಶಿಷ್ಟವಾದ ಸ್ಥಾನ ಗಳಿಸಿದ್ದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದ ಕ್ರೀಡಾಪಟುಗಳನ್ನು ಹೊಂದಿರುವ ಹೆಗ್ಗಳಿಕೆ ಪಡೆದಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.

ಕಠಿಣ ಪರಿಶ್ರಮದಿಂದ ಗುರಿ ಸಾಧಿಸಬಹುದಾಗಿದೆ. ವಿದ್ಯಾರ್ಥಿಗಳ ಕೌಶಲ್ಯ ಗುರುತಿಸಿ, ಕ್ರೀಡಾಭ್ಯಾಸದಲ್ಲಿ ತೊಡಗಲು ಪೋಷಕರು, ಶಿಕ್ಷಕರು ಪ್ರೇರಣೆ ನೀಡಬೇಕು. ತಾಲೂಕಿನಲ್ಲಿ ಕ್ರೀಡಾ ಹಾಸ್ಟಲ್‌ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾತಿಗೆ ಮತ್ತೂಮ್ಮೆ ಮನವಿ ಮಾಡಲಾಗುವುದು. ಸುಸಜ್ಜಿತ, ಅಗತ್ಯ ಸೌಲಭ್ಯ ಒಳಗೊಂಡ ಜಿಲ್ಲಾಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ ಸ್ಥಳ ನಿಗದಿಪಡಿಸಲಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದೆ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಯೋಜನೆಗಳಡಿ, ಆಟದ ಮೈದಾನ ಅಭಿವೃದ್ಧಿಪಡಿಸಲಾಗಿದೆ. ದಾನಿಗಳ, ಖಾಸಗಿ ಕಾರ್ಖಾನೆಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಅಗತ್ಯ ಕ್ರೀಡಾ ಸಲಕರಣೆ ಒದಗಿಸಲಾಗಿದೆ.

ಇತ್ತೀಚೆಗೆ ನಡೆದ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಲ್ಲಿ ತೆರವಾಗಿರುವ ದೈಹಿಕ ಶಿಕ್ಷಕರ ಸ್ಥಾನಗಳಿಗೆ ಶಾಶ್ವತ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪರ್ಯಾಯವಾಗಿ, ಇತರೆ ಶಾಲೆಗಳಿಂದ ನಿಯೋಜಿಸಲು ಕ್ರಮಕೈಗೊಳ್ಳಲಾಗುವುದು. ಇದರಿಂದ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ತೊಂದರೆಯಾಗುವುದು ನಿವಾರಣೆಗೊಳ್ಳಲಿದೆ ಎಂದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ ಮಾತನಾಡಿ, 2 ದಿನಗಳು ನಡೆಯುವ ಕ್ರೀಡಾಕೂಟದಲ್ಲಿ ಒಟ್ಟು 52 ಸ್ಪರ್ಧೆಗಳಲ್ಲಿ 4 ತಾಲೂಕುಗಳ ವ್ಯಾಪ್ತಿಯ 400 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ವಿಜೇತರು ನ.11ರಂದು ಮಂಡ್ಯ ಜಿಲ್ಲೆ ಆದಿಚುಂಚನಗಿರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವರು ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಸದಸ್ಯ ಡಿ.ಟಿ.ವೆಂಕಟೇಶ್‌, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಲಲಿತಮ್ಮ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಹೇಮಲತಾ, ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಎನ್‌.ಎಸ್‌. ಹುಸೇನಿ, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್‌, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಶಾಮಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್‌.ರಾಮಪ್ಪ, ದೈಹಿಕ ವಿಷಯ ತಜ್ಞ ಡಾ. ರಾಘವನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next