ಚಿಕ್ಕೋಡಿ: ರಾಜ್ಯದಲ್ಲಿನ ಗ್ರಾಮ ಪಂಚಾಯತಿಗಳಲ್ಲಿ 63 ಸಾವಿರ ನೌಕರರು ಕಾರ್ಯ ಮಾಡುತ್ತಿದ್ದಾರೆ. ನೌಕರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಿಐಟಿಯು ನೌಕರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾದ ಹೋರಾಟ ಮಾಡುತ್ತಿದೆ ಎಂದು ಗ್ರಾಮ ಪಂಚಾಯತ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಂ. ಜೈನೆಖಾನ್ ಹೇಳಿದರು.
ಇಲ್ಲಿನ ಶ್ರೀ ಪರಟಿನಾಗಲಿಂಗೇಶ್ವರ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡ 6ನೇ ತಾಲೂಕು ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೆಮ್ಮಾರಿ ಕೊರೊನಾ ಸಂದರ್ಭದಲ್ಲಿ ಮೃತಪಟ್ಟ ನೌಕರರ ಕುಟುಂಬಗಳಿಗೆ ಸರಕಾರದಿಂದ 30 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ ಎಂದರು.
ಕೇಂದ್ರ-ರಾಜ್ಯ ಸರಕಾರ ಜನ ಹಾಗೂ ನೌಕರರ ವಿರೋಧಿ ಶಾಸನಗಳನ್ನು ಜಾರಿಗೆ ತರುವ ಮೂಲಕ ನೌಕರರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ನೌಕರರ ಸಮಸ್ಯೆ ಬಗೆಹರಿಸುವುದಕ್ಕಾಗಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ 1988ರಲ್ಲಿ ಮಾರುತಿ ಮಾನ್ಪಡೆ ಹಾಗೂ ಎನ್.ಕೆ. ಉಪಾಧ್ಯಾಯ ಅವರು ಸಂಘಟನೆ ಹುಟ್ಟು ಹಾಕಿದರು. ಮಾನ್ಪಡೆಯವರು ಜಿಲ್ಲಾ ಪರಿಷತ್‌ಗೆ ಆಯ್ಕೆಯಾದ ನಂತರ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸರಕಾರದ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸುವ ಕಾರ್ಯ ಮಾಡಿದರು ಎಂದರು.
ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಮಾಜಿ ಅಧ್ಯಕ್ಷ ಟಿ. ಎನ್. ಬಭಗೌಡ ಮಾತನಾಡಿ, ಸಂಘಟನೆಯೊಂದಿಗೆ ನೌಕರರು ಸದಾಕಾಲ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ನೌಕರರ ಸಂಘದ ದುಂಡಪ್ಪಾ ಭಜನಾಯಕ, ಸಿಕಂದರ ಸಯ್ಯದ, ಗಣಪತಿ ಗುರವ, ಸುಮಿತ ಸಿರಗುಪ್ಪಿ, ಪ್ರವೀಣ ಖೋತ ಕುಮಾರ ಯಮಕನಮರಡಿ, ಗೌರವ್ವಾ ಮಡಿವಾಳ, ಶಕುಂತಲಾ ಉರಣೆ, ಭಾರತಿ ಸನದಿ, ಯಲ್ಲಪ್ಪಾ ನಾಯಿಕ, ಮಡ್ಡಪ್ಪಾ ಭಜಂತ್ರಿ, ದಯಾನಂದ ಪಾಟೀಲ, ರಮೇಶ ಪಾಟೀಲ, ಇತರರಿದ್ದರು.