Advertisement

ಶಿಥಿಲ ಗುಡಿಸಲೊಳಗಡೆ ದಿನ ಕಳೆಯುವ ವೃದ್ಧ ದಂಪತಿ

05:50 PM Feb 23, 2021 | Team Udayavani |

ಕಾರ್ಕಳ: ವಸತಿಗಾಗಿ, ಅಧಿಕಾರಿ, ಜನಪ್ರತಿನಿಧಿಗಳನ್ನು ಅಂಗಲಾಚಿ ಬೇಡುತ್ತಿದ್ದರೂ, ನಿರ್ಲಕ್ಷ್ಯ ತೋರಿದ ಪರಿಣಾಮ ಇಲ್ಲೊಂದು ವೃದ್ಧ ದಂಪತಿ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದೆ. ಶಿಥಿಲ ಗುಡಿಸಲಿನಲ್ಲೇ ಬದುಕು ಮುಗಿಯುವ ಮುನ್ನ ನಮಗೊಂದು ಸೂರು ಕಲ್ಪಿಸಿಕೊಡಿ ಎಂದು ಅಸಹಾಯಕತೆಯಿಂದ ಬೇಡಿಕೊಳ್ಳುತ್ತಿದ್ದಾರೆ.

Advertisement

ಕಾರ್ಕಳ ತಾ| ಪೇರಳ್ಕಟ್ಟೆ ದರ್ಖಾಸು ನಿವಾಸಿ ಬಾಬು ಶೆಟ್ಟಿಗಾರ್‌ (70) ಹಾಗೂ ಸುಶೀಲಾ (60) ದಂಪತಿ ಸೌಲಭ್ಯ ವಂಚಿತರು. ಇವರಿಗೆ ಮಕ್ಕಳೂ ಇಲ್ಲ.

ಟಾರ್ಪಲ್‌ ಹೊದಿಕೆಯ, ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಇವರ ವಾಸ. ಮನೆ ಛಾವಣಿ ಹಾನಿಗೊಳಗಾಗಿದೆ. ಇದಕ್ಕೆ ಟಾರ್ಪಾಲು ಹಾಕಿದ್ದಾರೆ. ಕಳೆದ ನಲ್ವತ್ತು ವರ್ಷಗಳಿಂದ ಇವರು ಇಲ್ಲಿದ್ದು ಐದು ವರ್ಷಗಳಿಂದ ಟಾರ್ಪಾಲು ಹೊದಿಕೆಯಡಿ ಇದ್ದಾರೆ.

ಪಡಿತರ, ಆಧಾರ್‌, ಗುರುತಿನ ಚೀಟಿ ದಾಖಲೆ ಪತ್ರಗಳಿದ್ದರೂ ಹಕ್ಕುಪತ್ರವಿಲ್ಲದ ಕಾರಣಕ್ಕೆ ಇವರಿಗೆ ನಿವೇಶನ ಭಾಗ್ಯ ದೊರಕಿಲ್ಲ. ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿ 2 ವರ್ಷ ಕಳೆದಿವೆ. ಆದರೆ ನೀಡಿದ ಅರ್ಜಿ ಏನಾಗಿದೆ ಎನ್ನುವುದು ಗೊತ್ತಿಲ್ಲ. ಅರ್ಜಿ ಬಗ್ಗೆ ಹಲವು ಬಾರಿ ಕಚೇರಿಗೆ ತೆರಳಿದ್ದಾರೆ. ಅಲ್ಲಿನ ಅಧಿಕಾರಿಗಳು ಸಹಾನುಭೂತಿ ವ್ಯಕ್ತಪಡಿಸಿದ್ದು ಬಿಟ್ಟರೆ, ಸ್ವಂತ ಸೂರು ಕಲ್ಪಿಸುವ ಇಚ್ಛೆ ಹೊಂದಿರಲಿಲ್ಲ ಎನ್ನುತ್ತಾರೆ ದಂಪತಿ. ಕೊನೆ ಕೊನೆಗೆ ಅವರು ಮುಖ ತಿರುಗಿಸಲು ಶುರುಮಾಡಿದರು, ಮತ್ತೆ ಕೇಳುವುದನ್ನೆ ಕೈ ಬಿಟ್ಟೆವು, ಅಲೆದಾಡಿ ಸಾಕಾಗಿದೆ ಎನ್ನುತ್ತಾರೆ.

ವೃದ್ಧಾಪ್ಯ ವೇತನ ಹೊರತುಪಡಿಸಿದರೆ ಯಾವ ಸೌಲಭ್ಯಗಳೂ ಇಲ್ಲ. ಪಡಿತರ ಅಂಗಡಿಯಿಂದ 10 ಕೆಜಿ ಅಕ್ಕಿ, 1 ಕೆ.ಜಿ. ಕಡಲೆ ಬಿಟ್ಟರೆ ಬೇರೇನಿಲ್ಲ. ಅಕ್ಕಿ ಮೊದಲು ಹೆಚ್ಚು ಸಿಗುತ್ತಿತ್ತು. ಈಗ ಅದನ್ನು ಕಡಿತಗೊಳಿಸಲಾಗಿದೆ ಎನ್ನುತ್ತಾರವರು. ಆಹಾರ ಸಾಮಗ್ರಿ ಅಂಗಡಿ, ರೇಶನ್‌ ಅಂಗಡಿಯಿಂದ ತರಬೇಕಿದ್ದರೆ, 5 ಕಿ.ಮೀ.ಗೆ ಆಟೋ ಮಾಡಬೇಕು. ಅದಕ್ಕೆ 100 ರೂ. ಖರ್ಚಾಗುತ್ತದೆ. ಇದೆಲ್ಲ ಇವರಿಗೆ ತ್ರಾಸ ದಾಯಕವಾಗಿದೆ.

Advertisement

ಹಾಸಿಗೆ ಹಿಡಿದ ವೃದ್ಧೆ
ಸುಶೀಲಾ ಅವರ ಆರೋಗ್ಯ ಕೆಲವು ದಿನ ಗಳಿಂದ ಕ್ಷೀಣಿಸಿದ್ದು, ಹಾಸಿಗೆ ಹಿಡಿದಿದ್ದಾರೆ. ಕೈಕಾಲುಗಳಲ್ಲಿ ನೀರು ತುಂಬಿಕೊಂಡು ದಪ್ಪವಾಗಿದೆ. ಮುಖ ದಪ್ಪವಾಗಿದ್ದು, ಕಿಡ್ನಿ ಸಮಸ್ಯೆ ಇದೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಕಣ್ಣು ಕಾಣಿಸುತ್ತಿಲ್ಲ. ಯಾವ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.

ಶಿಥಿಲ ಮನೆ
ಮಣ್ಣಿನಿಂದ ನಿರ್ಮಿಸಿದ ಹಳೆಯ ಮನೆಯ ಗೋಡೆಗಳು ಬಿರುಕು ಬಿಟ್ಟು ಶಿಥಿಲವಾಗಿದೆ. ಹೆಗ್ಗಣಗಳು ಮನೆಯಡಿ ಕೊರೆದು ಬಿಲ ನಿರ್ಮಿಸಿವೆ. ಹಾವು, ಚೇಳುಗಳು ಅದರೊಳಗೆ ಸೇರಿಕೊಂಡು ಭೀತಿ ಹುಟ್ಟಿಸುತ್ತಿವೆ. ಇಂತಹ ಕುಟುಂಬಕ್ಕೆ ತತ್‌ಕ್ಷಣಕ್ಕೆ ಆಸರೆ ಬೇಕಾಗಿದೆ.

ಬಾಣಲೆಯಿಂದ ಬೆಂಕಿಗೆ
ಇತ್ತೀಚಿನ ವರೆಗೂ ಶರೀರದಲ್ಲಿ ಶಕ್ತಿ ಇತ್ತು. ಹೀಗಾಗಿ ಕೂಲಿನಾಲಿ ಕೆಲಸ ಮಾಡಿ ಬದುಕು ಸವೆಸಿದ್ದ ದಂಪತಿಯಲ್ಲಿ ಈಗ ದೇಹದ ಶಕ್ತಿ ಕಡಿಮೆಯಾಗಿದ್ದು ದುಡಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೊರೊನಾ ಬಳಿಕ ಕೆಲಸವೂ ನೀಡುವವರಿಲ್ಲ. ಇದರಿಂದ ಇವರ ಬದುಕು ಬಾಣಲೆಯಿಂದ ಬೆಂಕಿಗೆ ಎನ್ನುವಂತಾಗಿದೆ.

ಸೂರಿಗಾಗಿ ಇಂಗಿತ
ಕುಟುಂಬದ ದಯನೀಯ ಸ್ಥಿತಿಯನ್ನು ಮನಗಂಡು ದಾನಿಗಳ ನೆರವಿನಿಂದ ಮನೆ ನಿರ್ಮಿಸಿಕೊಡುವ ಇಂಗಿತವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಹಳೆ ಮನೆಯನ್ನು ಕೆಡವಿ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ.
-ಕೆ.ಆರ್‌. ಸುನೀಲ್‌, ದಕ್ಷಿಣ ಪ್ರಾಂತ ಸಂಚಾಲಕರು,
-ಚೇತನ್‌ ಪೇರಳ್ಕೆ, ತಾಲೂಕು ಸಂಚಾಲಕರು

 ನಿವೇಶನಕ್ಕೆ ಅಡ್ಡಿ
ಡೀಮ್ಡ್ ಫಾರೆಸ್ಟ್‌ ಸಮಸ್ಯೆಯಿಂದ ನಿವೇಶನಕ್ಕೆ ಅಡ್ಡಿಯಾಗಿದೆ. ಸರಕಾರ ಮಟ್ಟದಲ್ಲಿ ಬಗೆಹರಿಯಬೇಕಿದೆ.
– ಶ್ರೀಧರ್‌ ಗೌಡ, ಈದು ಬಗರ್‌ ಹುಕುಂ ಅಕ್ರಮ ಸಕ್ರಮ ಸಕ್ರಮೀಕರಣ ಸಮಿತಿ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next