Advertisement

ದೂರದರ್ಶನಕ್ಕೆ ಮರುಜೀವ ತುಂಬುವ ಪ್ರಯತ್ನ

05:51 PM Dec 13, 2021 | Team Udayavani |

ಕಲಬುರಗಿ: ಕರ್ನಾಟಕದ ಪ್ರಥಮ ದೂರದರ್ಶನ ಕೇಂದ್ರ ಎಂಬ ಖ್ಯಾತಿ ಕಲಬುರಗಿಯ ದೂರದರ್ಶನ ಕೇಂದ್ರ ಹೊಂದಿದೆ. ಈಗ ಕೇಂದ್ರದ ಬಗ್ಗೆ ವಿವಿಧ ಊಹಾಪೋಹಗಳು ಕೇಳಿಬರುತ್ತಿವೆ. ಹೀಗಾಗಿ ಕೇಂದ್ರವು ಯಾವುದೇ ಸ್ಥಿತಿಯಲ್ಲಿ ಇದ್ದರೂ ಕೂಡ ಅದಕ್ಕೆ ಮರುಜೀವ ತುಂಬುವ ಕೆಲಸ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಹೇಳಿದರು.

Advertisement

ನಗರದ ಕನ್ನಡ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪರಿಷತ್ತಿನ ಕಾರ್ಯ ಚಟುವಟಿಕೆ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿಯ ದೂರದರ್ಶನ ಕೇಂದ್ರದಲ್ಲಿ ನಾನು ನಾಲ್ಕು ವರ್ಷಗಳ ಕಾಲ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. “ಹಲೋ ಮಿನಿಸ್ಟರ್‌’ ಕಾರ್ಯಕ್ರಮದ ಮೂಲಕ ರಾಜ್ಯವೇ ಇತ್ತ ತಿರುಗಿನೋಡುವಂತೆ ಮಾಡಿದ್ದೆ. ಅಲ್ಲದೇ, ಎಲ್‌. ಕೆ. ಅಡ್ವಾಣಿ ಸೇರಿ 30 ಜನ ಸಂಸದರನ್ನು ಕೇಂದ್ರಕ್ಕೆ ಕರೆದುಕೊಂಡ ಬಂದಿದ್ದೆ. “ದೂರ’ದರ್ಶನ ಎನ್ನುವುದನ್ನು “ಸಮೀಪ’ದರ್ಶನ ಮಾಡಿದ ಹೆಮ್ಮೆ ನನಗಿದೆ ಎಂದರು.

ಸದ್ಯ ಕಲಬುರಗಿಯ ದೂರದರ್ಶನ ಕೇಂದ್ರವು ಮುಚ್ಚಿದೆ ಎಂದು ಕೆಲವರು, ಮುಚ್ಚಲಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇದರ ನಿಜವಾದ ಸ್ಥಿತಿ ತಿಳಿದುಕೊಂಡು ಕೇಂದ್ರಕ್ಕೆ ಮರುಜೀವ ತುಂಬಲಾಗುತ್ತದೆ. ಕೇಂದ್ರದಿಂದ ಸ್ಥಳೀಯವರಿಗೆ ಅವಕಾಶಗಳು ಸಿಗಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಜನಪರ ಪರಿಷತ್‌: ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಪರಿಷತ್ತನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಬದುಕಿನ ಭಾಷೆಯಾಗಬೇಕು ಹಾಗೂ ಉದ್ಯೋಗ ಕಲ್ಪಿಸುವ ಭಾಷೆಯಾಗಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಮಹೇಶ ಜೋಶಿ ತಿಳಿಸಿದರು. ನಾವು ಅಧಿಕಾರಕ್ಕಾಗಿ ಪರಿಷತ್ತಿಗೆ  ಬಂದಿಲ್ಲ. ಕನ್ನಡ ಸೇವೆ ಮಾಡಲು ಬಂದಿದ್ದೇವೆ.

ರಾಜ್ಯದಲ್ಲಿ ಅಂದಾಜು ಏಳು ಕೋಟಿ ಕನ್ನಡಿಗರು ಇದ್ದೇವೆ. ಆದರೆ, ಪರಿಷತ್ತಿನಲ್ಲಿ ಕೇವಲ 3.40 ಲಕ್ಷ ಜನ ಆಜೀವ ಸದಸ್ಯತ್ವ ಹೊಂದಿದ್ದಾರೆ. ಅಂದರೆ ಶೇ.1ರಷ್ಟು ಕೂಡ ಆಜೀವ ಸದಸ್ಯರು ಇಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷದಲ್ಲಿ ಒಂದು ಕೋಟಿ ಸದಸ್ಯತ್ವದ ಗುರಿ ಹಾಕಿಕೊಳ್ಳಲಾಗಿದೆ ಎಂದರು.

Advertisement

ಆ್ಯಪ್‌ ಮೂಲಕ ಸದಸ್ಯತ್ವ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಜಗತ್ತು, ದೇಶದ ಯಾವುದೇ ಮೂಲೆಯಲ್ಲಿರುವ ಕನ್ನಡಿಗರು ಸದಸ್ಯತ್ವ ಪಡೆಯಬಹುದು. ಸದಸ್ಯತ್ವಕ್ಕಾಗಿ ಅರ್ಜಿ ಹಿಡಿದು ಅಲೆಯುವುದು ಮತ್ತು ಕಷ್ಟ ಪಡುವ ಪ್ರಮೇಯ ಕೂಡ ಬರುವುದಿಲ್ಲ. ಸದಸ್ಯತ್ವದ ಆರ್ಥಿಕ ಹೊರ ಕಡಿಮೆ ಮಾಡುವ ಉದ್ದೇಶದಿಂದ ಈಗಿರುವ ಶುಲ್ಕವನ್ನು 500ರಿಂದ 250 ರೂ.ಗೆ ಇಳಿಸಲಾಗಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಹಿರಿಯ ಮಾರ್ಗದರ್ಶನ, ಯುವಕರ ನೇತೃತ್ವದಲ್ಲಿ ಜಿಲ್ಲಾ ಪರಿಷತ್ತನ್ನು ಮುನ್ನಡೆಸಿಕೊಂಡು ಹೋಗಲಾಗುವುದು. ಶಿಕ್ಷಕರು ಸೇರಿ ಅನೇಕ ಇಲಾಖೆಗಳ ನೌಕರರು ಸಹ ಬರಹಗಾರರು ಮತ್ತು ಸಾಹಿತಿಗಳು ಆಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದು ಹೇಳಿದರು. ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ,
ಶಿವರಾಜ ಅಂಡಗಿ ವೇದಿಕೆ ಮೇಲಿದ್ದರು. ಹಿರಿಯ ಸಾಹಿತಿಗಳಾದ ಡಾ| ಸ್ವಾಮಿರಾವ ಕುಲಕರ್ಣಿ, ಎ.ಕೆ.ರಾಮೇಶ್ವರ, ಶಕುಂತಲಾ ಪಾಟೀಲ ಜವಳಿ, ಮೂಡಬಿ ಗುಂಡೇರಾವ, ಸಿದ್ದಲಿಂಗ ಬಾಳಿ, ಶಿವಲೀಲಾ ತೆಗನೂರ, ವಿಶ್ವನಾಥ ತೊಟ್ನಳ್ಳಿ, ಪ್ರಭುಲಿಂಗ ಮೂಲಗೆ, ರವೀಂದ್ರ ಭಂಟನಳ್ಳಿ ಹಾಗೂ ಕಸಾಪ ಸದಸ್ಯರು ಪಾಲ್ಗೊಂಡಿದ್ದರು.

ಒಟ್ಟಿಗೆ ಕುಣಿದ ನಂತರ ಮರೆತರು!
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಹೇಶ ಜೋಶಿ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ವಿವಿಧ ವಾದ್ಯಗಳ ಮೂಲಕ ಅವರನ್ನು ಸ್ವಾಗತ ಕೋರಲಾಯಿತು. ಇದಕ್ಕೂ ಮುನ್ನ ಕನ್ನಡ ಭವನದ ಆವರಣದಲ್ಲಿ ಹಾಲಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮತ್ತು ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ವಾದ್ಯಗಳ ಸದ್ದಿಗೆ ಕೈ-ಕೈ ಹಿಡಿದು ಒಟ್ಟಾಗಿ ಕುಣಿದು ಗಮನ ಸೆಳೆದರು. ನಂತರ ಕಾರ್ಯಕ್ರಮದಲ್ಲೂ ವೀರಭದ್ರ ಸಿಂಪಿ ಪಾಲ್ಗೊಂಡಿದ್ದರು. ಆದರೆ, ಅವರನ್ನು ವೇದಿಕೆ ಮೇಲೆ ಕರೆಯಲಿಲ್ಲ. ಸ್ವಾಗತ ಭಾಷಣದಲ್ಲೂ ವೀರಭದ್ರ ಸಿಂಪಿ ಹೆಸರು ಹೇಳಲಿಲ್ಲ. ಹೀಗಾಗಿ ಕಾರ್ಯಕ್ರಮದ ಅರ್ಧಕ್ಕೆ ಸಿಂಪಿ ಎದ್ದು ಹೊರಬಂದರು. ಅಲ್ಲದೇ, ಈ ಹಿಂದೆ ತೇಗಲತಿಪ್ಪಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲೂ ಸಿಂಪಿ ಅವರನ್ನು ಕರೆದಿರಲಿಲ್ಲ.

ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಉಚಿತ ಸದಸ್ಯತ್ವ ನೀಡಲಾಗುತ್ತಿದೆ. ಅದೇ ರೀತಿಯಾಗಿ ಅಂಗವಿಕಲರು ಕೂಡ ಉಚಿತವಾಗಿ ಸದಸ್ಯತ್ವ ಪಡೆಯಬಹುದಾಗಿದೆ. ಗೌರವಯುತವಾಗಿ ಸದಸ್ಯತ್ವ ನೀಡುವ ಗುರಿ ಹಾಕಿಕೊಂಡಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಯಾವ ಸದಸ್ಯರು ಮತದಾನಕ್ಕೆ ಸೀಮಿತವಾಗಬಾರದು.
ಮಹೇಶ ಜೋಶಿ, ರಾಜ್ಯಾಧ್ಯಕ್ಷ, ಕಸಾಪ

Advertisement

Udayavani is now on Telegram. Click here to join our channel and stay updated with the latest news.

Next