Advertisement

ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುವ ಮುಂಡಗೋಡು ಟಿಬೇಟಿಯನ್ ಕ್ಯಾಂಪ್ ಎಂಬ ಅದ್ಭುತ ತಾಣ !

03:32 PM Sep 27, 2020 | Mithun PG |

ಮೂಡುಬಿದಿರೆ: ಎತ್ತ ನೋಡಿದರೂ ಅಚ್ಚಹಸಿರು ಕೃಷಿ ಭೂಮಿ. ಖಡಕ್ ಕನ್ನಡ ಮಾತನಾಡುವ ಜನ. ಉದ್ದಕ್ಕೂ ಸಣ್ಣ ಪುಟ್ಟ ಅಂಗಡಿಗಳು. ಪಟ್ಟಣದ ನಡುವೆ ಜನಸಾಮಾನ್ಯರ ಮಧ್ಯೆ ಕೆಂಪು/ಹಳದಿ ಉಡುಗೆ ತೊಟ್ಟ ಬೌದ್ಧ ಭಿಕ್ಕುಗಳು. ಒಂದು ಕ್ಷಣಕ್ಕೆ ಇವರ ಗುಂಪು ನೋಡಿ ಇದು‌ ನೇಪಾಳನೋ, ಟಿಬೇಟ್ ರಾಜ್ಯವೋ ಎಂಬಂತೆ ಭಾಸವಾಗುತ್ತದೆ. ಆದರೆ ಇದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ತಟ್ಟಿಹಳ್ಳಿಯ‌ ಟಿಬೇಟಿಯನ್ ಕ್ಯಾಂಪ್/ಕಾಲೋನಿ. ಶಿರಸಿ‌ ಹಾಗೂ ಹುಬ್ಬಳ್ಳಿಯ ಮಧ್ಯೆ ಸಿಗುವ ಸುಂದರ ತಾಣ.

Advertisement

ಸುಮಾರು 54 ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ, ಆಗಿನ ಮೈಸೂರು ಸರ್ಕಾರವು ವಲಸೆ ಬಂದ ಟಿಬೇಟಿಯನ್ ಜನರಿಗೆ ಜಾಗ‌‌ ನೀಡಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಅದರಂತೆ‌ ಅವರು ಇಲ್ಲಿನ ಕ್ಯಾಂಪ್ ಗಳನ್ನು ಟಿಬೇಟಿಯನ್ ವಾಸ್ತು ಶೈಲಿಯಂತೆ ರಚಿಸಿದ್ದಾರೆ. ಈ ಕ್ಯಾಂಪ್ ನ ಒಳಗೆ ಬುದ್ಧನ ಪ್ರತಿಮೆಗಳಿದ್ದು, ಅದನ್ನು ಪ್ರತಿನಿತ್ಯ ಪ್ರಾರ್ಥಿಸಲಾಗುತ್ತದೆ‌. ಇವರು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಕ್ಯಾಂಪ್ ನ ಒಳಗಡೆ ಸಾಲಿನಲ್ಲಿ ಕುಳಿತು ತಮಗೆ ನೀಡಿದ ಆಹಾರದ ಪಾತ್ರೆಯನ್ನು ಮುಂದಿಟ್ಟುಕೊಂಡು ಭಕ್ತಿಯಿಂದ ಮಂತ್ರ ಪಠಣೆ ಮಾಡುತ್ತಾರೆ. ಮಂತ್ರ ಪಠಿಸುವ ಈ ಕ್ರಮವನ್ನು ನೋಡು ನೋಡುತ್ತಿದ್ದಂತೆ ನಾವೂ ಮಂತ್ರಮುಗ್ಧರಾಗಿಬಿಡುತ್ತೇವೆ.

ಕ್ಯಾಂಪ್ ನ ಹೊರಭಾಗದಲ್ಲಿ ಅಲ್ಲಿಗೆ ಭೇಟಿ ನೀಡುವವರಿಗೆ ರುಚಿ ರುಚಿಯಾದ ಮೊಮೋಸ್, ತುಕ್ಪ, ನೂಡಲ್ಸ್ ನಂತಹ ತಿನಿಸುಗಳು ತಯಾರಿರುತ್ತವೆ. ಇನ್ನು ಅವರದ್ದೇ ಶೈಲಿಯ ಉಡುಗೆಗಳು, ಮನೆಯ ಅಲಂಕಾರಿಕ ವಸ್ತುಗಳ ಮಾರಾಟದ ಅಂಗಡಿಗಳಿಗೆ ಒಮ್ಮೆ ಭೇಟಿ ನೀಡಲೇಬೇಕು. ಇಲ್ಲಿ ಕೇವಲ ಕ್ಯಾಂಪ್ ಮಾತ್ರವಲ್ಲದೆ ಶಾಲೆಗಳು, ಆಸ್ಪತ್ರೆ, ಪೋಸ್ಟ್ ಆಫೀಸ್, ಬ್ಯಾಂಕ್ ಗಳು ಈ ಕಾಲೋನಿಯಲ್ಲಿ ಸ್ಥಾಪಿತವಾಗಿವೆ.

Advertisement

ಹಲವಾರು ವರ್ಷಗಳಿಂದ ಅವರು ಇಲ್ಲಿಯೇ ವಾಸವಿರುವುದರಿಂದ ಈಗ ಅಲ್ಲಿನ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇನ್ನು ಇಲ್ಲಿ ಕೇವಲ ಬೌದ್ಧ ಬಿಕ್ಕುಗಳು ಮಾತ್ರವಲ್ಲದೆ ಟಿಬೇಟಿಯನ್ ಸಾಮಾನ್ಯ ಜನರು ಕೂಡ ತಮ್ಮದೇ ಮನೆಗಳನ್ನು ನಿರ್ಮಿಸಿ ಇಲ್ಲಿಯೇ ಉದ್ಯೋಗ ಪಡೆದು ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಇಲ್ಲಿನ ಕೃಷಿ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕ್ಯಾಂಪ್ ಗೆ ಭೇಟಿ ನೀಡಿದಾಗ ಅಲ್ಲಿ ಇರುವಂತಹ ಬಿಕ್ಕುಗಳಲ್ಲಿ ಮಾತನಾಡಿಸಿದರೆ ಅತೀ ವಿನಯದಿಂದ ಸಂವಹಿಸುತ್ತಾರೆ. ನಮಗೆ ಬೇಕಾದ ಅಲ್ಲಿನ ಮಾಹಿತಿಯನ್ನು ನೀಡುತ್ತಾರೆ. ಇಲ್ಲಿ ಕಳೆಯೋ ಆ ಸಮಯ ಅದೆಷ್ಟೇ ಅಲ್ಪವಾದರೂ ಪರದೇಶದ ಬೃಹತ್ ನೋಟವನ್ನೇ ನಮ್ಮ ಮುಂದಿಡುತ್ತದೆ. ವಿದೇಶ ಸುತ್ತಿದಂತೆ ಅನಿಸುವುದರಲ್ಲಿ ಅನುಮಾನವಿಲ್ಲ. ಅಂತಹ ಅದ್ಭುತ ತಾಣಕ್ಕೆ ಹೋಗಿ ಮರೆಯಲಾಗದ ಕ್ಷಣಗಳನ್ನು‌ ಹೊತ್ತು ತಂದಿರುವುದು ಖುಷಿಯ‌ ಸಂಗತಿ. ಅದರಲ್ಲೂ ಭಾರತದಲ್ಲೇ ಪರದೇಶದ ಸಂಸ್ಕೃತಿಯ ಸ್ವಾಗತವಾಗಿರುವುದು ಭಾವನೆಗಳಿಗೆ ಬಣ್ಣಿಸಲಾಗದು. ಇಂತಹ‌ ಅನುಭವ ನಿಜವಾಗಿಯೂ ದೊರೆಯಬೇಕೆಂದರೆ ಆ ಶಾಂತಿ ನಿಕೇತನಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು

-ಅನ್ವಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next