ನಮಸ್ಕಾರ. ನಾವಿಲ್ಲಿ ಕ್ಷೇಮ. ನೀನೂ ಕ್ಷೇಮದಿಂದ ಇದ್ದೀ ಎಂದು ಭಾವಿಸುವೆ. ಹೌದಲ್ವ? ನೀನೀಗ ಅಪರಿಚಿತ ಆಗ್ತಾ ಇದೀಯ. ಅಪ ರೂಪಕ್ಕೆ ಮಾತ್ರ ಸಿಕ್ತಾ ಇದೀಯ. ಈ ಹಿಂದೆ ಒಂದು ದಿನವೂ ತಪ್ಪದೆ ಮಟಮಟ ಮಧ್ಯಾಹ್ನವೇ ಮನೆಮುಂದೆ ನಿಲ್ಲುತ್ತಿದ್ದವ; ಒಂದಿಡೀ ಊರಿಗೇ “ಉಭಯ ಕುಶಲೋಪರಿ ಸಾಂಪ್ರತ’ದ ಪತ್ರಗಳನ್ನು ಬಟ ವಾಡೆ ಮಾಡುತ್ತಿದ್ದವ ನೀನು. ಅಂಥ ನಿನಗೇ ಇವತ್ತು ಒಂದು ಪತ್ರ ಬರೀ ತಿದೀನಲ್ಲ, ಇದು ಅಚ್ಚರಿ ಮತ್ತು ವಿಷಾದದ ಸಂಗತಿ. ಹೌದು ಈ ಪತ್ರದಲ್ಲಿ ನಿನ್ನ ಪರಿಚಯವಿದೆ. ನಿನ್ನ ವೃತ್ತಿ ಕುರಿತು ಮೆಚ್ಚುಗೆಯಿದೆ. ಹಳೆಯ ಮಧುರ ದಿನಗಳ ಸವಿನೆನಪಿದೆ.
Advertisement
***ನೆನಪಿದೆ ತಾನೆ? ಮೂವತ್ತು ವರ್ಷದ ಹಿಂದೆ ಮನೆಮನೆಯ ನೆಂಟನಾಗಿದ್ದವ ನೀನು. ಮಧ್ಯಾಹ್ನ ಒಂದು ಗಂಟೆಗೆ ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ಲಾಂಗ್ ಬೆಲ್ ಹೊಡೆಯುತ್ತಿದ್ದಂತೆಯೇ ಶಾಲೆಯ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಇಂತಿಂಥಾ ಊರಿನವರು ಯಾರ್ಯಾರು ಇದ್ದೀ ರಪ್ಪ ಎಂದು ಕೇಳುತ್ತಿದ್ದೆ. ಉತ್ತರ ಸಿಕ್ಕಾಗ, ಆ ಮಕ್ಕಳಿಗೆ ಪತ್ರ ಕೊಟ್ಟು, “ಆ ಮನೆಯವರಿಗೆ’ ಸಂಜೆ ಕೊಟಿºಡು ಎಂದು ಜವಾಬ್ದಾರಿ ಹೊರಿಸುತ್ತಿದ್ದೆ. ಸ್ವಾರಸ್ಯವೆಂದರೆ, ಆ ದಿನಗಳ ಶಾಲಾ ಪಠ್ಯದಲ್ಲಿ ನಿನ್ನನ್ನು ಕುರಿತು ಒಂದು ಪದ್ಯವೂ ಇತ್ತು. ಕನ್ನಡ ಮೇಸ್ಟ್ರೆ ರಾಗವಾಗಿ- “ಓಲೆಯ ಹಂಚಲು ಹೊರ ಡುವೆ ನಾನು/ ತೋರಲು ಆಗಸದಲಿ ಬಿಳಿ ಬಾನು/ಮನೆಯಲಿ ನೀವು ಬಿಸಿಲಲಿ ನಾನು/ ಕಾಗದ ಬಂತು ಕಾಗದವು…..’ ಎಂದು ಹಾಡಿದಾಗ, ಕಣ್ಣೆದುರು ಬಂದು ನಿಲ್ಲುತ್ತಿದ್ದುದು ನಿನ್ನ ಚಿತ್ರವೇ. ಪತ್ರಗಳನ್ನು ಮನೆಮನೆಗೆ ತಲುಪಿಸುವ ಉದ್ದೇಶದಿಂದ ನೀನು ದಿನಕ್ಕೊಂದು ಊರಿಗೆ ಹೋಗುತ್ತಿದ್ದೆ. ಅನುಕೂಲವಿದ್ದರೆ ಸೈಕಲ್‌ನಲ್ಲಿ, ಇಲ್ಲವಾದರೆ ಕಾಲ್ನಡಿಗೆಯಲ್ಲಿ!. ನೀನು ಹಳ್ಳಿಗಳಿಗೆ ಹೋದಾಗ ಯಾರಿಗೂ ಬೆರಗಾಗ್ತಾ ಇರಲಿಲ್ಲ. ಹೋಗದಿದ್ದರೆ ಮಾತ್ರ, ಎಲ್ಲರಿಗೂ ಏನೋ ಕಳೆದು ಕೊಂಡಂತೆ ಆಗ್ತಾ ಇತ್ತು. ಮನೆಯ ಮುಂದೆ ಸೈಕಲ್ ನಿಲ್ಲಿಸಿ “ಟ್ರಿಣ್ ಟ್ರಿಣ್’ ಅನ್ನಿಸಿದರೆ ಸಾಕು- “”ಪೋಸ್ಟಾ, ಬಂದೆ ಬಂದೆ’ ಅನ್ನುತ್ತಲೇ ಮನೆ ಯೊಡತಿ ಓಡಿಬಂದು ಕಾಗದಕ್ಕೆ ಕೈ ಒಡ್ಡುತ್ತಿದ್ದಳು. ನಿನ್ನ ಮುಖ ಕಂಡೇ- ಬಂದಿರುವುದು ಸಂತೋಷದ ಸುದ್ದಿಯೋ; ದುಃಖದ ವಾರ್ತೆಯೋ ಎಂದು ತಿಳಿದು ಬಿಡುತ್ತಿದ್ದಳು. ಕೆಲವೊಮ್ಮೆ ಸರಸರನೆ ಕಾಗದ ಗೀಚಿ, “ಇದನ್ನು ಪೋಸ್ಟು ಮಾಡಬೇಕಲ್ಲಣ್ಣ.’ ಎಂದು ಬೇಡುತ್ತಿದ್ದಳು!
***
ಈಗ ಜನ ಬದಲಾಗಿದ್ದಾರೆ. ಹೆಚ್ಚಿನವರಿಗೆ ಸಂಬಂಧಗಳು ಭಾರ ವಾಗಿವೆ. ಪತ್ರ ಬರೆಯುವ ಉಮೇದಿ ಕಣ್ಮರೆಯಾಗಿದೆ. ಅದಕ್ಕಿಂತ ಹೆಚ್ಚಾಗಿ, ಎಲ್ಲರಿಗೂ ಇ-ಮೇಲ್ ಐಡಿ ಇದೆ. ಎಲ್ಲರ ಬಳಿಯೂ ಮೊಬೈಲ್ ಇದೆ. ವೀಡಿಯೋ ಕಾಲ್ ಮಾಡಿ ವಿದೇಶದಲ್ಲಿ ಇರುವವರ ಜತೆ ಮಾತಾಡಲೂ ಸಾಧ್ಯವಿರುವಾಗ, ಪತ್ರ ಬರೆವ ಅಗತ್ಯವೇನು? ಈ ಹಿಂದೆ ತುಂಬ ಪ್ರೀತಿಯಿಂದ ನೂರಾ ಇಪ್ಪತ್ತೆಂಟು ಸಾಲನ್ನೂ ಪುಟ್ಟ ಕಾಗ ದದಲ್ಲಿ ಬರೀತಿದ್ದವರೇ, ಈಗ ನಾಲ್ಕು ಸಾಲಿನ ಎಸ್ಸೆಮ್ಮೆಸ್/ ವಾಟ್ಸ್ ಆ್ಯಪ್ ಮೆಸೇಜ್ ಕಳಿಸಿ ಸುಮ್ಮನಾಗ್ತಿದೀವಿ! ಅಜ್ಜನ ಪಿಂಚಣಿಗೆ, ಅಜ್ಜಿಯ ನೆಮ್ಮದಿಗೆ ಬ್ಯಾಂಕ್‌ನಲ್ಲಿ ಅಕೌಂಟು ತೆಗೆದು “ಆರಾಮ್’ ಆಗಿದೀವಿ. ಪೋಸ್ಟು ತುಂಬಾ ಲೇಟು, ಕೊರಿಯರ್ರೆà ಬೆಟರುÅ. ಇ-ಮೇಲ್ ಅದಕ್ಕಿಂತ ಬೆಸ್ಟು ಎಂದು ಮಾತು ಮರೆಸುತ್ತಿದ್ದೇವೆ!
Related Articles
ಆದ್ರೆ ಮೈ ಡಿಯರ್ ಅಂಚೆಯಣ್ಣಾ, ಇಂಥ ಹಲವು ಮಾತು- ಬೆಳ ವಣಿಗೆಗಳ ಮಧ್ಯೆಯೂ ನಿನ್ನನ್ನ ಪ್ರೀತಿಸಲಿಕ್ಕೆ, ಖುಷಿಯಿಂದಲೇ ನಿನಗೆ ಚೆಂದದ ಸೆಲ್ಯೂಟು ಹೊಡೆಯಲಿಕ್ಕೆ ಕಾರಣವಿದೆ. ಏನೆಂದರೆ ದೇಶದ ಲಕ್ಷಾಂತರ ಹಳ್ಳಿಗಳಿಗೆ ಪತ್ರಗಳನ್ನು ತಲುಪಿಸಿದ ನೀನು; ನಿನ್ನವರು ಲಂಚಕ್ಕೆ ಕೈ ಒಡ್ಡಿದವರಲ್ಲ. ಮಳೆ ಬರಲಿ, ಬಿಸಿಲು ಉಕ್ಕಲಿ, ಚಳಿ ಅಪ್ಪಲಿ, ನೀವೆಂದೂ ಕೆಲಸಕ್ಕೆ ನೆಪ ಹೇಳಲಿಲ್ಲ. ಇಂದಿನ ಕೆಲಸವನ್ನು ನಾಳೆ ಮಾಡಿದರಾಯ್ತು ಎನ್ನಲೂ ಇಲ್ಲ. ಸರಕಾರದ ಕೆಲಸ ದೇವರ ಕೆಲಸ ಎಂಬ ಮಾತು ನಿಮ್ಮಂಥವರಿಂದ ನಿಜವಾಯಿತು.
Advertisement
ಈಗ ಕಾಲದೊಂದಿಗೆ ನಾವೂ ಬದಲಾಗಿದೀವಿ. ಪ್ರಾಥಮಿಕ ಶಾಲಾ ಪಠ್ಯದಲ್ಲಿ ನಿನ್ನನ್ನು ಕುರಿತು ಇದ್ದ ಪದ್ಯವನ್ನು ಮರೆತ ಹಾಗೆ ನಾಳೆ, ನಿನ್ನನ್ನೂ ಮರೆತು ಬಿಡ್ತೀವಿ. ಆದ್ರೆ ಅಮ್ಮ ಬರೆದ ಅಮೂಲ್ಯ ಪತ್ರ ಅಂದುಕೊಂಡಾಗ, ಆಕೆ ಅಜ್ಜಿಗೆ ಪತ್ರ ಬರೆಸಿದ್ದು; ಅಜ್ಜನ ಸಾವಿಗೆ ಕಣ್ಣೀರಾದದ್ದು ನೆನಪಾದಾಗ, ಆ ಸುದ್ದಿಯ ಕಾರ್ಡ್/ ಟೆಲಿಗ್ರಾಂ ತಂದುಕೊಟ್ಟ ನಿನ್ನನ್ನ ನೆನಪು ಮಾಡಿಕೊಳ್ತೀವಿ. ಆ ನೆನಪಿನ ದೋಣಿಯಲ್ಲಿ ತೇಲ್ತಿವಿ.
ಗೆಳೆಯರ ದಿನ, ಎಳೆಯರ ದಿನ, ಹಿರಿಯರ ದಿನ, ಗೆಲುವಿನ ಕ್ಷಣ, ಹಾವಿನ ದಿನ, ಹೂವಿನ ದಿನ- ಹೀಗೆ ದಿನಕ್ಕೊಂದು ವಿಶೇಷವನ್ನು ಜತೆ ಮಾಡುತ್ತಾ, ಆ ವಿಶೇಷಕ್ಕೆ ಒಂದು ಕಥೆ ಪೋಣಿಸುತ್ತಾ ಬದುಕುವುದು ನಮಗೆಲ್ಲ ಅಂಟಿರುವ ವ್ಯಸನ ಮತ್ತು ಖಯಾಲಿ! ಅಂಥವರಿಗೆ ಅಂಚೆ ಇಲಾಖೆಯ ಕಾರ್ಮಿಕರ ದಿನವೊಂದು ಒಂದೂವರೆ ತಿಂಗಳ ಹಿಂದೆಯೇ ಬಂದು ಹೋಗಿದ್ದು ಗೊತ್ತಾಗಲೇ ಇಲ್ಲ. ಅದಕ್ಕಾಗಿ ಕ್ಷಮೆ ಇರಲಿ.ಕಡೆಯದಾಗಿ ಹೇಳಬೇಕಾದ ಮಾತು- ನಿನಗೆ ಒಳ್ಳೆಯದಾಗಲಿ. ಎಲ್ಲರೊಳಗೊಂದಾಗಿ ಬದುಕಿದ ನಿನ್ನ ಬುದ್ಧಿ ನಮಗೂ ಬರಲಿ.
– ಎ.ಆರ್.ಮಣಿಕಾಂತ್