ಹಾಸನ: ರಾಜ್ಯ ಹಾಗೂ ರೈತರ ಆಸ್ತಿ ನಂದಿನಿ. ಅದನ್ನು ಉಳಿಸಬೇಕು, ಬೆಳೆಸಬೇಕು. ನಂದಿನಿ ಸ್ಥಾನವನ್ನು ಅಮುಲ್ ಆಕ್ರಮಿಸಲು ಅವಕಾಶ ಕೊಡಕೂಡದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಹೇಮಾವತಿ ಪ್ರತಿಮೆ ಬಳಿ ಇರುವ ನಂದಿನಿ ಹಾಲಿನ ಮಾರಾಟ ಮಳಿಗೆಯಲ್ಲಿ ಸೋಮವಾರ ಬೆಳಗ್ಗೆ “ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ ನಂದಿನಿ ಉಳಿಸಿ ಅಭಿಯಾನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರೇ ಕಟ್ಟಿ ಬೆಳೆಸಿರುವ ಹೈನೋದ್ಯಮದ ಬೃಹತ್ ಸಂಸ್ಥೆ ಕೆಎಂಎಫ್ ಉಳಿಯಬೇಕು. ನಂದಿನಿ ಬ್ರ್ಯಾಂಡ್‌ಗೆ ಎಂದೆಂದಿಗೂ ಧಕ್ಕೆ ಆಗಬಾರದು ಎಂಬುದು ಮಹನೀಯರ ಆಶಯವಾಗಿತ್ತು. ಅವರ ಆಶಯಗಳನ್ನು ಗೌರವಿಸಿ ನಂದಿನಿ ಬೇಕೇ, ಅಮುಲ್ ಬೇಕೇ ಎಂಬುದನ್ನು ಸರಕಾರ ನಿರ್ಧರಿಸಲಿ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಮುಲ್ ಮಾರಾಟವನ್ನು ನಾವು ತಡೆಯಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಹಾಗಾದರೆ ರೇಷ್ಮೆ ದರ ಕುಸಿದಾಗ ನಿಯಂತ್ರಣಕ್ಕಾಗಿ ರೇಷ್ಮೆ ಆಮದು ತಡೆಯಲಿಲ್ಲವಾ? ಮುಕ್ತ ಮಾರುಕಟ್ಟೆ ಸರಿ. ಆದರೆ ನಮ್ಮ ರೈತರನ್ನೂ ಉಳಿಸಿಕೊಳ್ಳಬೇಕು. ನಂದಿನಿ ಉಳಿದರೆ ರಾಜ್ಯದ ರೈತರು ಉಳಿಯುತ್ತಾರೆ. ದುಬಾರಿ ದರ ನೀಡಿ ಅಮುಲ್ ಖರೀದಿಸುವ ಅಗತ್ಯವೂ ಇಲ್ಲ. ಇದನ್ನೆಲ್ಲ ಸರಕಾರ ಅರ್ಥ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಲಿ ಎಂದರು.
Related Articles