ನಟಿ ಅಮೃತಾ ಅಯ್ಯಂಗಾರ್ ಈ ವರ್ಷ “ಗುರುದೇವ್ ಹೊಯ್ಸಳ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ನಟ ಡಾಲಿ ಧನಂಜಯ್ ಅಭಿನಯದ “ಗುರುದೇವ್ ಹೊಯ್ಸಳ’ ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್ ಮೂರನೇ ಬಾರಿ ಈ ಸಿನಿಮಾದಲ್ಲಿ ಧನಂಜಯ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ “ಗುರುದೇವ್ ಹೊಯ್ಸಳ’ ಸಿನಿಮಾದ ಬಗ್ಗೆ ಅಮೃತಾ ಅವರಿಗೂ ಸಾಕಷ್ಟು ನಿರೀಕ್ಷೆಯಿದೆ.
“ಧನಂಜಯ್ ಅವರೊಂದಿಗೆ ಇದು ನನಗೆ ಮೂರನೇ ಸಿನಿಮಾ. ಇದರಲ್ಲಿ ನಾನು ಗಂಗಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಗಂಗಾ ಪೊಲೀಸ್ ಆಫೀಸರ್ ಗುರುದೇವ್ ಹೊಯ್ಸಳನ ಹೆಂಡತಿ ಪಾತ್ರವಾಗಿದೆ. ಜೊತೆಗೆ ಗಂಗಾ ಭರತನಾಟ್ಯ ಹೇಳಿಕೊಡುವ ಟೀಚರ್ ಕೂಡ ಆಗಿರುತ್ತಾಳೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ’ ಎಂದು “ಗುರುದೇವ್ ಹೊಯ್ಸಳ’ ಸಿನಿಮಾದ ಬಗ್ಗೆ ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಅಮೃತಾ ಅಯ್ಯಂಗಾರ್.
ಈಗಾಗಲೇ “ಗುರುದೇವ್ ಹೊಯ್ಸಳ’ ಸಿನಿಮಾದ “ಅರೇ ಇದು ಎಂಥಾ ಭಾವನೆ…’ ಎಂಬ ರೊಮ್ಯಾಂಟಿಕ್ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಗಾಯಕ ಹರಿಚರಣ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿನಲ್ಲಿ ತನ್ನ ಮಡದಿಯ ಮುಂದೆ ಪ್ರೀತಿಯ ನಿವೇದನೆ ಮಾಡುವ ರೊಮ್ಯಾಂಟಿಕ್ ಗಂಡನಾಗಿ ಧನಂಜಯ್ ಕಾಣಿಸಿಕೊಂಡರೆ, ಅಮೃತಾ ಹೋಮ್ಲಿ ಲುಕ್‌ನಲ್ಲಿ ಮಿಂಚಿದ್ದಾರೆ. ಒಟ್ಟಾರೆ ಈ ಹಾಡಿನಲ್ಲಿ ಧನಂಜಯ್ ಮತ್ತು ಅಮೃತಾ ಜೋಡಿಯ ರೊಮ್ಯಾನ್ಸ್ ಕೂಡ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ತಮ್ಮ ಮತ್ತು ಧನಂಜಯ್ ಜೋಡಿಯ ಬಗ್ಗೆ ಮಾತನಾಡುವ ಅಮೃತಾ, “ಈಗಾಗಲೇ ಧನಂಜಯ್ ಅವರೊಂದಿಗೆ ಕೆಲಸ ಮಾಡಿರುವು ದರಿಂದ, ಅವರೊಂದಿಗೆ “ಗುರುದೇವ್ ಹೊಯ್ಸಳ’ ಸಿನಿಮಾದಲ್ಲೂ ಕೆಲಸ ಮಾಡುವುದು ತುಂಬ ಕಂಫರ್ಟ್ ಆಗಿತ್ತು. ಆದರೆ ಮೊದಲ ಬಾರಿಗೆ ಈ ಥರದ ಪಾತ್ರ ಮಾಡುವುದು ನನಗೆ ಚಾಲೆಂಜಿಂಗ್ ಆಗಿತ್ತು. ಸಿನಿಮಾದ ಕಥೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಈ ಹಾಡು ಮೂಡಿಬಂದಿದೆ. ಸಿನಿಮಾ ನೋಡಿದಾಗ ಈ ಹಾಡಿನ ಇಂಪಾರ್ಟೆನ್ಸ್ ಗೊತ್ತಾಗುತ್ತದೆ. ಈ ಹಾಡಿಗೆ ಎಲ್ಲ ಕಡೆಗಳಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ.
“ಒಬ್ಬ ಪೊಲೀಸ್ ಅಧಿಕಾರಿಯ ಜೀವನದ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಕನ್ನಡದ ಆಡಿಯನ್ಸ್‌ಗೆ ಇದೊಂದು ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುವ ಸಿನಿಮಾ ಆಗುತ್ತದೆ’ ಎಂಬುದು ಅಮೃತಾ ಮಾತು.