ಚಂಡೀಗಢ : ಮೂರು ಜೀವಗಳನ್ನು ಬಲಿಪಡೆದು ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಳ್ಳಲು ಕಾರಣವಾದ ಅಮೃತಸರ ಗ್ರೆನೇಡ್ ದಾಳಿಯು ಇಬ್ಬರು ಸ್ಥಳೀಯ ಯುವಕರ ಕೃತ್ಯ ಇರಬಹುದೆಂಬ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಹಾಗಿದ್ದರೂ ಪೊಲೀಸರು ಇದನ್ನು ಉಗ್ರ ಕೃತ್ಯ ಎಂದೇ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಪೊಲೀಸರು ಅಮೃತಸರ ಗ್ರೆನೇಡ್ ದಾಳಿಯಲ್ಲಿ ಇಬ್ಬರು ಸ್ಥಳೀಯ ಯುವಕರು ಶಾಮೀಲಾಗಿರುವುದನ್ನು ಶಂಕಿಸಿದ್ದು ಆ ನಿಟ್ಟಿನಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಶಂಕಿತ ಯುವಕರಿಬ್ಬರು ಗ್ರೆನೇಡ್ ದಾಳಿಗೆ ಪೂರ್ವ ಸಿದ್ಧತೆಯ ರೂಪದಲ್ಲಿ ಎರಡು ಬಾರಿ ಆಶ್ರಮ ಆವರಣದ ಸರ್ವೇ ನಡೆಸಿದ್ದಾರೆ ಮತ್ತು ಭಾನುವಾರದಂದು ಇಲ್ಲೊಂದು ದೊಡ್ಡ ಧಾರ್ಮಿಕ ಸಮಾವೇಶ ನಡೆಯಲಕ್ಕಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಈ ದಾಳಿಯಲ್ಲಿ ಯುವಕರು ಬಳಸಿರುವ ಗ್ರೆನೇಡ್‌ಗಳನ್ನು ಖಾಲಿಸ್ಥಾನ ಬೆಂಬಲಿಸುವ ಸಂಘಟನೆಗಳು ಪೂರೈಸಿರುವುದನ್ನೂ ಶಂಕಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಮಧ್ಯಾಹ್ನ ಮೋಟಾರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ಉದ್ದನೆಯ ಗಡ್ಡ ಧಾರಿ ವ್ಯಕ್ತಿಗಳು ಆಶ್ರಮದ ಆವರಣಕ್ಕೆ ಗ್ರೆನೇಡ್‌ಗಳನ್ನು ಎಸೆದು ಪರಾರಿಯಾಗಿದ್ದರು. ಪರಿಣಾಮವಾಗಿ ಸಂಭವಿಸಿದ್ದ ಸ್ಫೋಟಕ್ಕೆ ಮೂವರು ಬಲಿಯಾಗಿ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಅಮೃತಸರದ ರಾಜಾಸಾನ್ಸಿ ಸಮೀಪದ ಅದ್ಲಿವಾಲ್ ಗ್ರಾಮದಲ್ಲಿರುವ ನಿರಂಕಾರಿ ಭವನದಲ್ಲಿ ಗ್ರೆನೇಡ್ ದಾಳಿಯ ವೇಳೆ ಧಾರ್ಮಿಕ ಸಮಾವೇಶ ನಡೆಯುತ್ತಿತ್ತು. ಗ್ರೆನೇಡ್ ಎಸೆದ ಇಬ್ಬರೂ ಯುವಕರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ಇವರಲ್ಲಿ ಒಬ್ಟಾತ ಮೊದಲು ಸಭಾಭವನದ ದ್ವಾರದಲ್ಲಿದ್ದವರ ಮೇಲೆ ಗ್ರೆನೇಡ್ ಎಸದರೆ ಮತ್ತೂಬ್ಬ ಸಮಾವೇಶದ ವೇದಕೆಯತ್ತ ಗ್ರೆನೇಡ್ ಎಸೆದಿದ್ದ.