Advertisement
ದ.ಕ. ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ಪಾಲಿಕೆ ಸಹಿತ ವಿವಿಧ ಸರಕಾರಿ ಕಚೇರಿ, ಸರಕಾರೇತರ ಸಂಸ್ಥೆಗಳ ಸಹಿತ ವಿವಿಧ ಕಡೆಗಳಲ್ಲಿ ಅಮೃತ ಮಹೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ವಿವಿಧ ರಾಜಕೀಯ ಪಕ್ಷಗಳು, ಶಿಕ್ಷಣ ಸಂಸ್ಥೆಗಳು, ಸಂಘ – ಸಂಸ್ಥೆಗಳು ಕೂಡ ಹಬ್ಬದ ಸಡಗರಕ್ಕೆ ಕೊನೆಯ ಹಂತದ ತಯಾರಿ ನಡೆಸುತ್ತಿವೆ. ಮೂರು ದಿನಗಳ ಸಂಭ್ರಮದ ಹಬ್ಬಕ್ಕೆ ಎಲ್ಲೆಲ್ಲೂ ಸಡಗರ ಮೇಳೈಸಿದೆ.
Related Articles
Advertisement
ದೀಪಾಲಂಕಾರದ ಸೊಬಗು
ಸ್ವಾತಂತ್ರ್ಯದ ಅಮೃತ ಮಹೋತ್ಸವ ವನ್ನು ವೈವಿಧ್ಯಮಯ, ವರ್ಣರಂಜಿತವಾಗಿ ಆಚರಿಸಿ ಸ್ಮರಣೀಯವಾಗಿರಿಸಲು ನಗರದ ಪ್ರಮುಖ ವೃತ್ತಗಳನ್ನು ಅಲಂಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಈ ಬಾರಿ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದೆ. ಮಹಾನಗರ ಪಾಲಿಕೆ, ಸುರತ್ಕಲ್ ವಲಯ ಕಚೇರಿ, ಪುರಭವನ, ಈಜುಕೊಳ ಸಹಿತ ಪ್ರಮುಖ ಕಟ್ಟಡಗಳು ಬೆಳಕಿನಿಂದ ಶೃಂಗಾರವಾಗಲಿದೆ. ಲಾಲ್‌ಬಾಗ್ ವೃತ್ತ, ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಗೋವಿಂದ ಪೈ ವೃತ್ತ, ಎ.ಬಿ. ಶೆಟ್ಟಿ ವೃತ್ತ, ಕ್ಲಾಕ್ ಟವರ್ ವೃತ್ತ, ಮಾರ್ನಮಿಕಟ್ಟೆ ವೃತ್ತ, ಕೋಟಿಚೆನ್ನಯ ವೃತ್ತ ನಂದಿಗುಡ್ಡೆ, ಸರ್ಕೀಟ್ ಹೌಸ್ ವೃತ್ತ, ಮಲ್ಲಿಕಟ್ಟೆ ವೃತ್ತ, ಬೊಂದೇಲ್ ವೃತ್ತ, ಸುರತ್ಕಲ್ ವೃತ್ತ, ಜಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಯ ವೃತ್ತಗಳಿಗೆ ಕೇಸರಿ, ಬಿಳಿ, ಹಸುರು ವರ್ಣದ ಎಲ್.ಇ.ಡಿ. ದೀಪ ಗಳೊಂದಿಗೆ ಆ. 13ರಿಂದ 15ರ ವರೆಗೆ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.
ಆ. 14: ಬಿಕರ್ನಕಟೆಯಲ್ಲಿ “ಅಮರ ಸುಳ್ಯʼದ ನೆನಪು!
ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ತಿರಂಗಾ ಯಾತ್ರೆ ಆ. 13ರಂದು ನಗರದಲ್ಲಿ ನಡೆಯಲಿದೆ. ಪುರಭವನ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅನಂತರ ಯಾತ್ರೆಯು ಹಂಪನಕಟ್ಟೆ ಮೂಲಕ ಸಾಗಿ ನವಭಾರತ್ ಸರ್ಕಲ್ ಮೂಲಕ ಪಿವಿಎಸ್‌ನಲ್ಲಿ ಸಮಾಪನಗೊಳ್ಳಲಿದೆ. ಆ. 14ರಂದು ಬಿಕರ್ನಕಟ್ಟೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಮರ ಸುಳ್ಯ ಹೋರಾಟ ನಡೆಸಿದವರನ್ನು ನೇಣುಗಂಬಕ್ಕೆ ಏರಿಸಿದ್ದ ಬಿಕರ್ನಕಟ್ಟೆಯಲ್ಲಿಯೇ ಅಮರ ಸುಳ್ಯ ಹೋರಾಟ ನೆನಪಿಸುವ ಕಾರ್ಯಕ್ರಮ ಇದಾಗಿದೆ.
ಮನೆಗಳಲಿ ಧ್ವಜ: ಎಲ್ಲ ಮನೆಗಳ ಮೇಲೆ ಆ. 13ರಂದು ಸೂರ್ಯೋದಯದ ಅನಂತರ ಬೆಳಗ್ಗೆ 8 ಗಂಟೆಯೊಳಗೆ ಧ್ವಜಾರೋಹಣ ಮಾಡಬೇಕು. ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆ. 15ರ ಸೂರ್ಯಾಸ್ತದ ವೇಳೆಗೆ ಇಳಿಸಲು ಕ್ರಮ ಕೈಗೊಳ್ಳಬೇಕು. ತ್ರಿವರ್ಣ ಧ್ವಜ ಸಂಹಿತೆಯಂತೆ ಧ್ವಜಕ್ಕೆ ಅಲಂಕಾರ ಮಾಡುವಂತಿಲ್ಲ. ಹರಿದ, ಕೊಳಕಾದ ತ್ರಿವರ್ಣ ಧ್ವಜವನ್ನು ಹಾರಿಸುವಂತಿಲ್ಲ. –ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ದಕ್ಷಿಣ ಕನ್ನಡ