Advertisement
ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೋಟ ಶ್ರೀ ಅಮೃತೇಶ್ವರಿ ಅಮ್ಮ ಭಕ್ತರ ಇಷ್ಟಾರ್ಥಗಳ ಜೊತೆ ಕಷ್ಟಗಳನ್ನೂ ನಿವಾರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರ ಹರಕೆ ಹೊರುತ್ತಾರೆ. ಆದರೆ ಈ ದೇವಸ್ಥಾನಕ್ಕೆ ಮುಸ್ಲಿಂ ಸೇರಿದಂತೆ ಬೇರೆ ಧರ್ಮದ ಮಹಿಳೆಯರೂ ಬಂದು ಸಂತಾನ ಸಿದ್ಧಿಗಾಗಿ ಹರಕೆಯನ್ನು ಹೊತ್ತ ನಿದರ್ಶನಗಳೂ ಇವೆ. ಕೋಟದ ಈ ದೇವಸ್ಥಾನ ಧಾರ್ಮಿಕ ಸೌಹಾರ್ದತೆಯ ಉಳಿವಿಗೂ ಕಾರಣವಾಗಿದೆ.
Related Articles
Advertisement
ಅಷ್ಟೇ ಅಲ್ಲದೆ ಉದ್ಭವಿಸಿದ ಲಿಂಗಗಳು ದಿನಕಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಈ ರೀತಿಯ ವಿಶೇಷತೆ ದೇಶದ ಇತರ ದೇವಾಲಯಗಳಲ್ಲಿ ಕಾಣಲಸಾಧ್ಯ. ಸಂತಾನ ಪ್ರಾಪ್ತಿಗಾಗಿ ಇತರೆ ದೇಶದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಯಕ್ಷಗಾನ ಬಯಲಾಟ ಇಲ್ಲಿನ ವಿಶೇಷ ಸೇವೆ.
ಸಂತಾನ ಇಲ್ಲದ ಭಕ್ತರು ಇಲ್ಲಿ ಉದ್ಭವಿಸಿದ ಲಿಂಗಗಳಿಗೆ ಎಣ್ಣೆ ಹಚ್ಚಿ ಅದರ ಮೇಲೆ ಹುರುಳಿ ಕಾಳುಗಳನ್ನು ಇಟ್ಟು ಹಿಂಗಾರವನ್ನು ಹಿಡಿದು ಸಂಕಲ್ಪ ಮಾಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಪಂಚಾಮೃತಾಭಿಷೇಕ, ತುಲಾಭಾರ, ತೊಟ್ಟಿಲು ಸೇವೆ ಇತ್ಯಾದಿಗಳು ಪ್ರಮುಖ ಸೇವೆಗಳು.
ದೇವಸ್ಥಾನದ ಮುಂಭಾಗದಲ್ಲಿ ವರುಣ ತೀರ್ಥ ಎಂಬ ವಿಶಾಲ ಕೆರೆ ಇದೆ. ಈ ಕೆರೆಯ ನೀರನ್ನೇ ಅಮ್ಮನ ಅಭಿಷೇಕಕ್ಕೆ ನಿತ್ಯವೂ ಬಳಸಲಾಗುತ್ತದೆ. ಈ ದೇವಸ್ಥಾನದಲ್ಲಿ ಸೇವೆಯನ್ನು ಜೋಗಿ ಸಮುದಾಯದವರು ನಡೆಸಿಕೊಂಡು ಬರುತ್ತಿದ್ದಾರೆ. ಅಮೃತೇಶ್ವರಿ ದೇವಿಯು ಸುತ್ತಲ 14 ಗ್ರಾಮಗಳಿಗೂ ಗ್ರಾಮದೇವತೆ. ಈ ಎಲ್ಲಾ ಗ್ರಾಮದವರು ಮನೆಯಲ್ಲಿ ಜನಿಸಿದ ಮಗುವನ್ನು ಮೊದಲಾಗಿ ಹಲವು ಮಕ್ಕಳ ತಾಯಿಯಾದ ಅಮೃತೇಶ್ವರಿ ದೇವಸ್ಥಾನಕ್ಕೆ ಕರೆತಂದು ತದನಂತರ ಬೇರೆ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಅಲ್ಲದೆ ಮನೆಯಲ್ಲಿ ತೊಂದರೆ, ಮಕ್ಕಳ ವಿದ್ಯೆ, ಅರೋಗ್ಯ, ಅಭಿವೃದ್ಧಿಯ ಕುರಿತು ಯಾವುದೇ ತೊಂದರೆ ಇದ್ದರೂ ತಾಯಿಯ ಬಳಿ ಕೇಳಿಕೊಂಡರೆ ಪರಿಹರಿಸುತ್ತಾಳೆ.
ದೇವಾಲಯದ ಹೊರಾಂಗಣದಲ್ಲಿ ವೀರಭದ್ರ ಹಾಗೂ ನಾಗನ ಗುಡಿಯಿದೆ. ಒಳಾಂಗಣದಲ್ಲಿ ಪಂಜುರ್ಲಿ, ಬೊಬ್ಬರ್ಯ, ಚಿಕ್ಕು ಎಂಬ ತುಳುನಾಡಿನ ದೈವಗಳಿವೆ. ಈ ದೇವಾಲಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಒಂದು “ಪಾಸಿಟಿವ್ ವೈಬ್ ” ನಮ್ಮಲ್ಲಿ ಮೂಡುತ್ತದೆ. ಭಕ್ತಿಯಿಂದ ಏನೇ ಕೇಳಿಕೊಂಡರೂ ತಾಯಿ ದಯ ಪಾಲಿಸುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ದೇವಾಲಯದ ಪಕ್ಕದಲ್ಲೇ ಕೋಟ ಬೀಚ್ ಸಹ ಇದ್ದು, ಇದು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
-ಲಾವಣ್ಯ. ಎಸ್
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು