“ಅನುಷ್ಕಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಅಮೃತಾ ಅಯ್ಯಂಗಾರ್, ಹೊಸ ವರ್ಷದ ಆರಂಭದಿಂದಲೇ ಒಂದರ ಹಿಂದೊಂದು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ. ಹೌದು, ಸದ್ಯ ಅಮೃತಾ ಅಯ್ಯಂಗಾರ್, ಧನಂಜಯ್ ಅವರಿಗೆ ನಾಯಕಿಯಾಗಿ “ಪಾಪ್ ಕಾರ್ನ್ ಮಂಕಿ ಟೈಗರ್’, ಚಿರಂಜೀವಿ ಸರ್ಜಾಗೆ ನಾಯಕಿಯಾಗಿ “ಶಿವಾರ್ಜುನ’ ಚಿತ್ರದಲ್ಲಿ ಅಭಿನಯಿಸಿದ್ದು, ಮದರಂಗಿ ಕೃಷ್ಣ ನಟಿಸಿ ನಿರ್ದೇಶಿಸುತ್ತಿರುವ “ಲವ್ ಮಾಕ್ಟೇಲ್’ ಚಿತ್ರದಲ್ಲೂ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮೂರೂ ಚಿತ್ರಗಳೂ ತೆರೆಗೆ ಬರಲು ಸಿದ್ಧವಾಗಿದ್ದು, ವರ್ಷದ ಆರಂಭದಲ್ಲಿಯೇ ಈ ಮೂರೂ ಚಿತ್ರಗಳು ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ಅಮೃತಾ ಅಭಿನಯಿಸಿರುವ ಬಹುತೇಕ ಹೊಸ ಪ್ರತಿಭೆಗಳ “ಓ’ ಎಂಬ ಹಾರರ್ ಚಿತ್ರ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿದೆ. ಮತ್ತೊಂದು ಚಿತ್ರ “ಬಡವ ರಾಸ್ಕಲ್’ ಚಿತ್ರ ಕೂಡ ಚಿತ್ರೀಕರಣದಲ್ಲಿ ನಿರತವಾಗಿದೆ. ಇವೆಲ್ಲದರ ನಡುವೆ ಅಮೃತಾ ಅಯ್ಯಂಗಾರ್ ಅಭಿನಯಿಸುತ್ತಿರುವ ಮತ್ತೊಂದು ಚಿತ್ರದ ಬಗ್ಗೆ ಸುದ್ದಿ ಹೊರಬಿದ್ದಿದೆ.
ಹೌದು, ನಿರೂಪ್ ಭಂಡಾರಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರದ ಟೈಟಲ್, ನಿರೂಪ್, ಅಮೃತಾ ಅವರೊಂದಿಗೆ ಅಭಿನಯಿಸುತ್ತಿರುವ ಇತರೆ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ. ಅಂದಹಾಗೆ, ಅನೂಪ್ ಭಂಡಾರಿ ಸುದೀಪ್ ಅವರಿಗೆ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ನಿರೂಪ್ ಕೂಡಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಮೃತಾ, ನಿರೂಪ್‌ಗೆ ಜೋಡಿ ಎನ್ನಲಾಗಿದೆ.
ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದರ ಬಗ್ಗೆ ಮಾತನಾಡುವ ಅಮೃತಾ, “ಇಲ್ಲಿಯವರೆಗೆ ಆರು ಚಿತ್ರಗಳಲ್ಲಿ ಅಭಿನಯಿಸಿದ್ದು, ಪ್ರತಿಯೊಂದರಲ್ಲೂ ಒಂದೊಂದು ವಿಭಿನ್ನ ಪಾತ್ರಗಳನ್ನು ಮಾಡುವ ಅವಕಾಶ ಸಿಕ್ಕಿದೆ. ಚಿತ್ರರಂಗದಲ್ಲಿ ಹೊಸದಾಗಿ ಬಂದವರಿಗೆ ಈ ಥರ ಅವಕಾಶ ಸಿಗೋದು ಅಪರೂಪ. ಇಂಥದ್ದೊಂದು ಅವಕಾಶ ನನಗೆ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ. ಈ ಎಲ್ಲಾ ಸಿನಿಮಾಗಳಲ್ಲಿ ಸಿಕ್ಕ ಪಾತ್ರಗಳು ನನ್ನ ಪ್ರತಿಭೆಯನ್ನು ಪರೀಕ್ಷಿಸುವಂತಿದ್ದವು. ನಾನು ಒಬ್ಬಳು ಹೀರೋಯಿನ್ ಆಗಿ ಗುರುತಿಸಿಕೊಳ್ಳುವುದಕ್ಕಿಂತ ಒಬ್ಬ ನಟಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ.
ಅದರಲ್ಲೂ ರಿಯಾಲಿಸ್ಟಿಕ್ ಸಬ್ಜೆಕ್ಟ್ ಸಿನಿಮಾಗಳು ಮಾಡೋದಕ್ಕೆ ನನಗೆ ತುಂಬ ಇಷ್ಟ. ಈಗಾಗಲೇ ನಾನು ಅಭಿನಯಿಸಿರುವ ಚಿತ್ರಗಳು ಈ ವರ್ಷ ಒಂದರ ಹಿಂದೊಂದು ಬಿಡುಗಡೆಯಾಗುತ್ತಿವೆ. ಜನ ಅದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ’ ಎನ್ನುತ್ತಾರೆ. ಇದರ ನಡುವೆ ಕನ್ನಡದ ಜೊತೆ ತಮಿಳು, ತೆಲುಗಿನಲ್ಲೂ ಅಮೃತಾಗೆ ಚಿತ್ರಗಳ ಆಫರ್ ಬರುತ್ತಿವೆಯಂತೆ. ಈ ಬಗ್ಗೆ ಮಾತನಾಡುವ ಅಮೃತಾ, “ಸದ್ಯ ಕನ್ನಡ ಚಿತ್ರಗಳಲ್ಲಿ ಬಿಝಿಯಾಗಿದ್ದೇನೆ. ಇಲ್ಲೇ ಒಳ್ಳೆಯ ಚಿತ್ರಗಳು ಸಿಗುತ್ತಿವೆ. ಕನ್ನಡದಲ್ಲಿ ಮೊದಲು ಗುರುತಿಸಿಕೊಂಡ ನಂತರ ಬೇರೆ ಭಾಷೆಗಳ ಚಿತ್ರ ಕಡೆಗೆ ಗಮನ ಕೊಡುತ್ತೇನೆ’ ಎನ್ನುತ್ತಾರೆ.