Advertisement
ನಾಟರಾಗದ ನಾರಾಯಣ ತೀರ್ಥರ ಕೃತಿ ಜಯ ಜಯ ರಮಾನಾಥದೊಂದಿಗೆ ಕಛೇರಿ ಆರಂಭವಾಯಿತು. ಅನಂತರ ಸಂತ ತ್ಯಾಗರಾಜರ ಮಯಾಮಾಳವ ಗೌಳದ ವಿದುಲಕು ಹಾಗು ರೀತಿಗೌಳದ ಆಲಾಪನೆಯೊಂದಿಗೆ ಶ್ಯಾಮಾ ಶಾಸ್ತ್ರಿಗಳ ನಿನುವಿನಾ ಅಂಬಾ ಕೃತಿಯನ್ನು ಮನೋಜ್ಞವಾಗಿ ಪ್ರಸ್ತುತ ಪಡಿಸಲಾಯಿತು.ಅನಂತರ ಕನ್ನಡರಾಗದ ರಾಗಾಲಾಪನೆಯೊಂದಿಗೆ ಮುತ್ತುಸ್ವಾಮಿ ದೀಕ್ಷಿತರ ಶ್ರೀ ಮಾತೃಭೂತಮ್ ಹಾಗು ಖರಹರಪ್ರಿಯರಾಗದಲ್ಲಿ ಶ್ರೀ ಪುರಂದರದಾಸರ ಮುರಹರ ನಗಧರ ಹಾಡಲಾಯಿತು. ತೋಡೀರಾಗದ ವಿಸ್ತಾರ ಆಲಾಪನೆಯೊಂದಿಗೆ ಸಂತ ತ್ಯಾಗರಾಜರ ಕೊಲುವ ಮರೆಗದ ನೆರವಲ್ ಹಾಗೂ ಸ್ವರ ವಿನ್ಯಾಸದೊಂದಿಗೆ ಮೂಡಿಬಂತು. ರಾಗಂ-ತಾನಂ-ಪಲ್ಲವಿಗೆ ಕಮಾಚ್ ರಾಗವನ್ನು ಆಯ್ದುಕೊಂಡ ಗಾಯಕಿ ತಮ್ಮ ಗುರು ಆರ್.ಕೆ. ಶ್ರೀರಾಮ್ ಕುಮಾರ್ ಅವರ ಪಲ್ಲವಿ “ವರದಾ ವರ ವೆಂಕಟದಾಸ’ವನ್ನು ಪ್ರಸ್ತುತ ಪಡಿಸಿದರು. ರಾಗಮಾಲಿಕೆಯಲ್ಲಿ ವಲಚಿ, ಭಾಗೇಶ್ರೀ, ರೇವತಿ ಹಾಗು ಸಿಂಧುಭೈರವಿ ರಾಗಗಳು ಶಿಷ್ಯೆ ಮತ್ತು ಗುರುಗಳ ಗಾಯನ-ವಾದನದಲ್ಲಿ ಇಂಪಾಗಿ ಮೂಡಿ ಬಂತು. ಕೊನೆಯಲ್ಲಿ ಮಾಂಡ್ ರಾಗದ ದೇವಕೀನಂದನ ಹಾಗೂ ಯಮುನ ಕಲ್ಯಾಣಿಯಲ್ಲಿ ಮರಾಠಿ ಅಭಂಗ್‌ನ್ನು ಪ್ರಸ್ತುತ ಪಡಿಸಲಾಯಿತು. ಕುರುಂಜಿಯ ಮಂಗಳದೊಂದಿಗೆ ಕಛೇರಿ ಪರಿಸಮಾಪ್ತಿಯಾಯಿತು.
ಬೇಲೂರು ಶ್ರೀಧರ್