Advertisement

ಅಭಿಮಾನಿಗಳ ಮಧ್ಯೆ ರವಿಚಂದ್ರನ್‌ ಬರ್ತ್‌ಡೇ

12:00 PM May 31, 2017 | |

“ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ಅವರು ಮಂಗಳವಾರ ರಾಜಾಜಿನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳೊಂದಿಗೆ 56ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಜಾನೆಯಿಂದಲೇ ರವಿಚಂದ್ರನ್‌ ಮನೆಯ ಮುಂದೆ ಸಾಲುಗಟ್ಟಿ ನಿಂತಿದ್ದ ಸಾವಿರಾರು ಅಭಿಮಾನಿಗಳು, ರವಿಚಂದ್ರನ್‌ ಅವರಿಗೆ ಶುಭಾಶಯ ಹೇಳುವ ಮೂಲಕ ಪ್ರೀತಿಯ ಅಭಿಮಾನ ಮೆರೆದರು.

Advertisement

ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳು, ರವಿಚಂದ್ರನ್‌ ಅವರಿಗಾಗಿಯೇ ವಿಶೇಷ ಹೂ ಮಾಲೆಗಳು, ಕೇಕ್‌ಗಳನ್ನು ತಂದಿದ್ದರು. ಅವೆಲ್ಲವನ್ನೂ ಪ್ರೀತಿಯಿಂದಲೇ ಸ್ವೀಕಾರ ಮಾಡಿದ ರವಿಚಂದ್ರನ್‌, ಅಭಿಮಾನಿಗಳ ತಂದಿದ್ದ ಅಭಿಮಾನದ ಕೇಕ್‌ ಕತ್ತರಿಸಿ, ಅವರಿಗೂ ತಿನ್ನಿಸುವ ಮೂಲಕ ಅವರೊಂದಿಗೆ ಸಂಭ್ರಮಿಸಿದರು.

ಮೊದಲು ತಮ್ಮ ಕುಟುಂಬದ ಜತೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ರವಿಚಂದ್ರನ್‌, ತಾಯಿ ಅವರ ಆಶೀರ್ವಾದ ಪಡೆದು, ನಂತರ ಪತ್ನಿ, ಸಹೋದರ ಬಾಲಾಜಿ, ಹಾಗೂ ಪುತ್ರಿ, ಪುತ್ರರಿಗೆ ಕೇಕ್‌ ತಿನ್ನಿಸುವ ಮೂಲಕ ಸಂತಸದ ಕ್ಷಣ ಕಳೆದರು. ಇದೇ ವೇಳೆ ಮನೆಯ ಮುಂದೆ ಬಂದಿದ್ದ ನೂರಾರು ಅಭಿಮಾನಿಗಳತ್ತ ಕೈ ಬೀಸಿದ ರವಿಚಂದ್ರನ್‌, ಪ್ರತಿಯೊಬ್ಬರನ್ನೂ ಹತ್ತಿರ ಕರೆದು, ಅವರ ಪ್ರೀತಿಯ ಅಭಿಮಾನವನ್ನು ಸ್ವೀಕರಿಸಿದರಲ್ಲದೆ, ಎಲ್ಲರ ಜತೆ ಸೆಲ್ಫಿ ತೆಗೆಸಿಕೊಂಡು, ಅಭಿಮಾನಿಗಳನ್ನು ಖುಷಿಪಡಿಸಿದರು.

ಇದಕ್ಕೂ ಮುನ್ನ, ರವಿಚಂದ್ರನ್‌ ಅವರ ಮನೆಯ ಮುಂದೆ ಹಾಕಿದ್ದ, ಫ್ಲೆಕ್ಸ್‌ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರಲ್ಲದೆ, ರವಿಚಂದ್ರನ್‌ ಅವರಿಗೆ ಜಯಕಾರ ಹಾಕುವ ಮೂಲಕ ಸಂಭ್ರಮಪಟ್ಟರು. ಬೆಳಗ್ಗೆಯಿಂದಲೇ ರವಿಚಂದ್ರನ್‌ ಅವರ ಮನೆಗೆ ಚಿತ್ರರಂಗದ ಅನೇಕ ಗಣ್ಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ನಟ,ನಟಿಯರು ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಅಭಿಮಾನಿಗಳ ಜೊತೆಗೆ ಮಾತನಾಡಿದ ರವಿಚಂದ್ರನ್‌, ತಾವು “ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲ, ಶ್ರೀಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದು, ಅದಕ್ಕಾಗಿ ಬೇಕಾದ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿರುವುದಾಗಿ ಪ್ರಕಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next