ಚೆನ್ನೈ: ಚೆನ್ನೈ ಸಮೀಪದ ಎನ್ನೋರ್ ನಲ್ಲಿ ರಸಗೊಬ್ಬರ ತಯಾರಿಕಾ ಘಟಕದ ಪೈಪ್ ನಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:UP: ಪ್ರೀತಿಗೆ ಮನೆಯವರ ವಿರೋಧ; ಪ್ರಿಯತಮೆ ಹಣೆಗೆ ಸಿಂಧೂರವಿಟ್ಟು; ನೇಣಿಗೆ ಶರಣಾದ ಜೋಡಿ
ಚಿಕಿತ್ಸೆಯ ಬಳಿಕ ಬುಧವಾರ ಬೆಳಗ್ಗೆ ಆರು ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ವರದಿ ವಿವರಿಸಿದೆ. ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್ ನ ಸಮುದ್ರ ಸಮೀಪ ಹಾದು ಹೋಗಿದ್ದ ಪೈಪ್ ನಿಂದ ಅಮೋನಿಯಾ ಗ್ಯಾಸ್ ಸೋರಿಕೆ ಆಗಿದ್ದು, ಈ ಸಂದರ್ಭದಲ್ಲಿ ಸಮೀಪದಲ್ಲಿ ವಾಸವಾಗಿದ್ದ ನಿವಾಸಿಗಳು ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆ ಒಳಗಾಗಿರುವುದಾಗಿ ದೂರಿದ್ದರು.
ಸ್ಥಳೀಯರ ದೂರನ್ನು ಆಲಿಸಿದ ನಂತರ ಅಮೋನಿಯಾ ಗ್ಯಾಸ್ ಪೈಪ್ ಲೈನ್ ನಲ್ಲಿ ಸೋರಿಕೆಯಾಗುತ್ತಿರುವುದನ್ನು ಪತ್ತೆ ಹಚ್ಚಿ, ಅದನ್ನು ಸರಿಪಡಿಸಲಾಗಿದೆ ಎಂದು ತಮಿಳುನಾಡು ಪರಿಸರ ನಿಯಂತ್ರಣ ಮಂಡಳಿ ಪ್ರತಿಕ್ರಿಯೆ ನೀಡಿದೆ.
ಯಾರೂ ಕೂಡಾ ಗಾಬರಿಯಾಗಬೇಕಾಗಿಲ್ಲ. ಎನ್ನೋರ್ ನಲ್ಲಿನ ಅಮೋನಿಯಾ ಗ್ಯಾಸ್ ಸೋರಿಕೆ ನಿಂತಿದ್ದು, ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದಾಗಿದೆ ಎಂದು ಮಂಡಳಿ ತಿಳಿಸಿದೆ. ಸ್ಥಳದಲ್ಲಿ ಮೆಡಿಕಲ್ ಮತ್ತು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಆವಡಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ಅವರು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.