Advertisement

ಹಸಿವು ಮುಕ್ತ ಸಮಾಜದ ಸಂಕಲ್ಪ; ಇಂದಿರಾ ಕ್ಯಾಂಟೀನ್ ಗೆ ಚಾಲನೆ

03:52 PM Aug 17, 2017 | Team Udayavani |

ಬೆಂಗಳೂರು: ದೇಶದ ಪ್ರತಿಯೊಬ್ಬರಿಗೂ “ರೋಟಿ, ಕಪಡೆ, ಮಕಾನ್‌’ ದೊರೆಯಬೇಕೆಂಬುದು ಇಂದಿರಾ ಗಾಂಧಿಯವರ
ಆಶಯವಾಗಿತ್ತು. ಅದು ಕಾಂಗ್ರೆಸ್‌ ಸರ್ಕಾರವಿರುವ ಕರ್ನಾಟಕದಲ್ಲಿ ಸಾಕಾರಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹರ್ಷ ವ್ಯಕ್ತಪಡಿಸಿದರು.

Advertisement

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಬುಧವಾರ ಜಯನಗರ ವಾರ್ಡ್‌ನಲ್ಲಿ ಆಯೋಜಿಸಿದ್ದ ಇಂದಿರಾ ಕ್ಯಾಂಟೀನ್‌ಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ “ಪ್ರತಿಯೊಬ್ಬರಿಗೂ ಊಟ, ಬಟ್ಟೆ ಮತ್ತು ವಸತಿ ಕಲ್ಪಿಸುವ ಕೆಲಸಗಳನ್ನು ಕಾಂಗ್ರೆಸ್‌ ಮಾಡುತ್ತಿದೆ. ಏನನ್ನಾದರೂ ಸಾಧಿಸ ಬೇಕೆಂಬ ಛಲದಿಂದ ಬೆಂಗಳೂರಿಗೆ ಬರುವ ಕೆಲವರಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಂತಹವರಿಗೆ ಕಡಿಮೆ ದರದಲ್ಲಿ ತಿಂಡಿ-ಊಟ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ,’ ಎಂದು ತಿಳಿಸಿದರು.

ನಗರದಲ್ಲಿನ ಬಡವರು ಹಾಗೂ ಬಲಹೀನರು ಹಸಿವಿನಿಂದ ನರಳುವ ಸ್ಥಿತಿ ದೂರವಾಗಲಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ
ಯಾವುದೇ ದುಬಾರಿ ರೆಸ್ಟೋರೆಂಟ್‌ಗೆ ಕಡಿಮೆಯಿಲ್ಲದ ಗುಣಮಟ್ಟದ ಆಹಾರ 5 ಮತ್ತು 10ರೂ. ಗಳಿಗೆ ಸಿಗುತ್ತಿರುವುದು ಸಂತಸದ ಸಂಗತಿ. ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಈ ಯೋಜನೆ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಎರಡು ಹೊತ್ತಿನ ಊಟ ಮಾಡಲಾಗದವರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 5 ವರ್ಷದೊಳಗಿನ ಶೇ.28ರಷ್ಟು ಮಕ್ಕಳು ನಿಗದಿಗಿಂತ ಕಡಿಮೆ ತೂಕವಿರುವ ಅಂಶ ಬೆಳಕಿಗೆ ಬಂದಿದೆ. ಉಳಿದಂತೆ ಶೇ.13ರಷ್ಟು ಮಹಿಳೆಯರು ಹಾಗೂ ಶೇ.10ರಷ್ಟು ಪುರುಷರು ಅಗತ್ಯಕ್ಕಿಂತ ಕಡಿಮೆ ತೂಕವಿದ್ದಾರೆ. ಹೀಗಾಗಿ ಜನರ ಅನುಕೂಲಕ್ಕಾಗಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

70ರ ದಶಕದಲ್ಲಿ ಇಂದಿರಾ ಹಠಾವೋ ಎಂದು ವಿರೋಧ ಪಕ್ಷಗಳು ಕೂಗಿದ್ದವು. ಆಗ “ಗರೀಬಿ ಹಠಾವೋ’ ಮೂಲಕ ಇಂದಿರಾ ಅವರು ಉತ್ತರ ನೀಡಿದ್ದರು. ಅವರ ನೂರನೇ ಜನ್ಮಶತಮಾನೋತ್ಸವ ವರ್ಷ ಇದಾಗಿದ್ದು, ಅವರು ಬಡವರ ಬಗೆಗೆ ಹೊಂದಿದ್ದ ಕಾಳಜಿಯ ಪ್ರತೀಕವಾಗಿ ಕ್ಯಾಂಟೀನ್‌ಗಳಿಗೆ ಅವರ ಹೆಸರಿಡಲಾಗಿದೆ ಎಂದು ತಿಳಿಸಿದರು. 

Advertisement

ಮೊದಲ ದಿನ ಕ್ಯಾಂಟೀನ್‌ ಭೋಜನ ಸವಿದವರ ಸಂಖ್ಯೆ 60 ಸಾವಿರ! 
ಬೆಂಗಳೂರು :ಬುಧವಾರ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್‌ನಲ್ಲಿ ಮೊದಲ ದಿನ 60 ಸಾವಿರಕ್ಕೂ ಹೆಚ್ಚು ಮಂದಿ ಉಚಿತವಾಗಿ ಭೋಜನ ಸವಿದಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾಟಿಸಿದ ಕನಕನಪಾಳ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ 7 ಸಾವಿರ ಮಂದಿ ಭೋಜನ ಸ್ವೀಕರಿಸಿದ್ದು, ರಾತ್ರಿ 101 ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ
ವಿತರಿಸಲಾದ ಊಟವನ್ನು 55 ಸಾವಿರಕ್ಕೂ ಹೆಚ್ಚು ಮಂದಿ ಸೇವಿಸಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ 1500ಕ್ಕೂ ಹೆಚ್ಚು ಜನರು ಕ್ಯಾಂಟೀನ್‌ಗಳಿಗೆ ಭೇಟಿ  ನೀಡಿರುವುದು ವಿಶೇಷವಾಗಿದೆ. ಆ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗೆ ಭೇಟಿ ನೀಡುವ ಜನರಿಗೆ
ಅನುಗುಣವಾಗಿ ಆಹಾರ ಪೂರೈಕೆ ಮಾಡಿಕೊಳ್ಳಲು ಕ್ಯಾಂಟೀನ್‌ಗೆ ಆಹಾರ ಪೂರೈಕೆ ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಸೂಚಿಸಿದ್ದಾರೆ. 

ಬಡವರ ಪರ ಯೋಜನೆಗಳು ಎಲ್ಲಿದ್ದರೂ ಕಾಪಿ ಮಾಡುತ್ತೇವೆ
ತಮಿಳುನಾಡಿನ ಯೋಜನೆಯನ್ನು ಸರ್ಕಾರ ಕಾಪಿ ಮಾಡಿದೆ ಎಂದು ಕೆಲವರು ದೂರುತ್ತಾರೆ. ಆದರೆ, ಬಡವರ ಪರವಾದ ಯೋಜನೆಗಳು ಎಲ್ಲಿದ್ದರೂ ಅವುಗಳನ್ನು ಕಾಪಿ ನಾವು ಮಾಡುತ್ತೇವೆ. ತಮಿಳುನಾಡಿನ ಕ್ಯಾಂಟೀನ್‌ಗಿಂತಲೂ ಕ್ಯಾಂಟೀನ್‌ ಭಿನ್ನ ಎಂದು ಸಿಎಂ ಹೇಳಿದರು. 

ಮೋದಿ ಅವರದ್ದು ಮನ್‌ ಕೀ ಬಾತ್‌ ನಮ್ಮದು ವಾಂಗೀಬಾತ್‌
ಇಂದಿರಾ ಗಾಂಧಿಯವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿ ಬಡವರು ಸಹ ಬ್ಯಾಂಕ್‌ಗಳ ಮೆಟ್ಟಿಲು ಹತ್ತುವಂತೆ ಮಾಡಿದ್ದರು. ಆದರೆ, ಕಪ್ಪು ಹಣ ಹೊರತರುವ ಹೆಸರಲ್ಲಿ ಮೋದಿ ಡಿಮಾನಿಟೈಸೇಷನ್‌ ಮಾಡಿ ಬ್ಯಾಂಕ್‌ಗಳಿಂದ ಬಡವರನ್ನು, ರೈತರನ್ನು ದೂರ
ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಮೋದಿಯವರದ್ದು ಕೇವಲ “ಮನ್‌ ಕೀ ಬಾತ್‌’ ಆಯಿತು. ಆದರೆ, ನಮ್ಮದು ವಾಂಗಿಬಾತ್‌ ಎಂದು ಮೋದಿಯವರನ್ನು ಸಿಎಂ ಲೇವಡಿ ಮಾಡಿದರು. 

ಸಿಎಂರಿಂದ “ಹಸಿವು ಹಠಾವೋ’
ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಯವರು ಗರೀಬಿ ಹಠಾವೋ ಎಂದಿದ್ದರು. ಇದೀಗ ರಾಜ್ಯದಲ್ಲಿ ಹಸಿವು ಹಠಾವೋ ಎನ್ನುವ ಮೂಲಕ ರಾಜ್ಯವನ್ನು ಹಸಿವು ಮುಕ್ತಗೊಳಿಸಲು ಸಿಎಂ ಮುಂದಾಗಿದ್ದಾರೆ ಎಂದು ಮೇಯರ್‌ ಜಿ.ಪದ್ಮಾವತಿ
ತಿಳಿಸಿದರು. 

ಸರ್ವಜ್ಞರ ವಾಕ್ಯ ಉಲ್ಲೇಖ
ಹಸಿದವರಿಗೆ ಊಟ ನೀಡುವ ಕುರಿತು ಮಾತನಾಡುವ ವೇಳೆ ರಾಹುಲ್‌ ಗಾಂಧಿ ಅವರು ಕವಿ ಸರ್ವಜ್ಞ ಅವರ, “”ಅನ್ನದಾನಗಳಿಗಿಂತ ಇನ್ನ ದಾನಗಳಿಲ್ಲ, ಅನ್ನಕ್ಕೆ ಮೇಲು ಹಿರಿದಿಲ್ಲ, ಲೋಕಕ್ಕೆ ಅನ್ನವೇ ಪ್ರಾಣ” ಎನ್ನುವ ವಾಕ್ಯವನ್ನು ಇಂಗಿಷ್‌ನಲ್ಲಿ ಉಲ್ಲೇಖೀಸುವ ಮೂಲಕ ಇಂದಿರಾ ಕ್ಯಾಂಟೀನ್‌ಗಳ ಮಹತ್ವವನ್ನು ತಿಳಿಸಿದರು. 

ಹಣ ಪಾವತಿಸಿ ಟೋಕನ್‌ ಪಡೆದ ರಾಹುಲ್‌
ಇಂದಿರಾ ಕ್ಯಾಂಟೀನ್‌ನಲ್ಲಿ ರಾಹುಲ್‌ ಗಾಂಧಿಯವರು 10 ರೂ. ಪಾವತಿಸಿ ಟೋಕನ್‌ ಪಡೆದು ಊಟ ಮಾಡಿದರು. ಉಚಿತವಾಗಿ ಊಟ ನೀಡುತ್ತಿದ್ದರೂ, ಸಾಂಕೇತಿಕವಾಗಿ ಅವರು ಹಣ ಪಾವತಿಸಿ, ವಾಂಗಿಬಾತ್‌ ಮತ್ತು ಮೊಸರನ್ನು ಸವಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರು ಸಹ ಹಣ ಪಾವತಿಸಿ ಊಟ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next