Advertisement

ರಾಜಿ ಮರ್ಜಿ ಬಿಡಿ: ಹೊಂದಾಣಿಕೆ ರಾಜಕಾರಣ ವಿರುದ್ಧ ಅಮಿತ್‌ ಶಾ ಕಿಡಿ

01:08 AM Feb 24, 2023 | Team Udayavani |

ಬೆಂಗಳೂರು/ಬಳ್ಳಾರಿ: ಕೆಲವು ಬಿಜೆಪಿ ನಾಯಕರು ರಾಜಿ ರಾಜಕೀಯ ಮಾಡಿಕೊಂಡು ಬರುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ  ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇನ್ನೇನಿದ್ದರೂ ಅಡ್ಜಸ್ಟ್‌ಮೆಂಟ್‌ ಇಲ್ಲ, ಖಡಕ್‌ ರಾಜಕಾರಣ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

Advertisement

ಗುರುವಾರ ರಾಜ್ಯ ಪ್ರವಾಸದಲ್ಲಿದ್ದ ಅವರು ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಪ್ರತ್ಯೇಕ ಗೆಲುವಿನ ಟಾಸ್ಕ್ ನೀಡಿದರು.

ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಭಾಗದ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು, ಹಳೆ ಮೈಸೂರು ಭಾಗದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ಮಾಡಕೂಡದು ಎಂದು ಸೂಚನೆ ನೀಡಿದರು.  ರಾಜಧಾನಿ ಬೆಂಗಳೂರು ಸಹಿತ ಹಳೆ ಮೈಸೂರು ಭಾಗದಲ್ಲಿ ಪಕ್ಷ ನಿರೀಕ್ಷಿತ ಸ್ಥಾನ ಗೆಲ್ಲುವಲ್ಲಿ ವಿಫ‌ಲವಾಗುತ್ತಿರುವುದೇ ಮ್ಯಾಜಿಕ್‌ ನಂಬರ್‌ ತಲುಪುವುದಕ್ಕೆ ಪ್ರಧಾನ ಅಡ್ಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಪ್ರಮುಖರು ಸಹಿತ 60 ಜನರ ಜತೆಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಸಿದ ಸಭೆಯಲ್ಲಿ ಈ ಆಕ್ಷೇಪ ವ್ಯಕ್ತಪಡಿಸಿದ್ದು, ಬೆಂಗಳೂರು ನಗರದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲೇಬೇಕು ಎಂಬ ಗುರಿ ನೀಡಿದ್ದಾರೆ.

ಹಳೆ ಮೈಸೂರಿನಲ್ಲಿ  ಸಾಮರ್ಥ್ಯ ವೃದ್ಧಿ

Advertisement

ಈಗಿರುವ ಕ್ಷೇತ್ರಗಳಿಗಿಂತ ಹೆಚ್ಚು ಕಡೆ ಗೆಲ್ಲುವುದಕ್ಕೆ ಬೆಂಗಳೂರಿನಲ್ಲಿ ಸಾಧ್ಯತೆಗಳಿವೆ. ಅದೇ ರೀತಿ ಹಳೆ  ಮೈಸೂರು ಭಾಗದಲ್ಲೂ ಪಕ್ಷದ ಸಾಮರ್ಥ್ಯ ವರ್ಧನೆಗೆ ಅವಕಾಶವಿದೆ. ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಿದ್ದರೂ ಹಿನ್ನಡೆಯಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು ಅಡ್ಜೆಸ್ಟ್‌ಮೆಂಟ್‌ ರಾಜಕಾರಣವನ್ನು ಕೈ ಬಿಡುವಂತೆ ಕೆಲವು ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಲ್ಲ ವಿಭಾಗಗಳಿಗೂ ಈಗಿರುವ ಸ್ಥಾನಕ್ಕಿಂತ ಹೆಚ್ಚಿನ ಗುರಿ ನೀಡಲಾಗಿದೆ. ಕೆಲವೆಡೆ ಚುನಾವಣೆಯಿಂದ ಚುನಾವಣೆಗೆ ಪಕ್ಷ ಬೆಳೆದಿದೆ. ಆದರೆ ಹಳೆ ಮೈಸೂರು ಭಾಗದಲ್ಲಿ ಮಾತ್ರ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಳ ಹಂತದ ನಾಯಕರನ್ನೂ ಪಕ್ಷಕ್ಕೆ ಸೇರಿಸಲು ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೀಸಲು ಕ್ಷೇತ್ರಗಳ ಟಾರ್ಗೆಟ್‌

ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಗಣಿನಾಡು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ ಸಂಡೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಅಮಿತ್‌ ಶಾ ಭಾಗವಹಿಸಿದ್ದರು. ಬಳಿಕ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ಅವರು, ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಈ ಮೂಲಕ ಎಸ್‌ಸಿ-ಎಸ್‌ಟಿ ಮತಗಳು ಕಾಂಗ್ರೆಸ್‌ ಪರ ಎನ್ನುವ ನಂಬಿಕೆಯನ್ನು ಅಳಿಸಿಹಾಕಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಹಾಗೆಯೇ, ಈ ನಾಲ್ಕು ಜಿಲ್ಲೆಗಳಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಿಸುವ ಜವಾಬ್ದಾರಿ ಸಚಿವ ಶ್ರೀರಾಮುಲು ಮೇಲಿದೆ ಎಂದಿರುವ ಶಾ, ಪಕ್ಕದ ವಿಜಯನಗರ ಜಿಲ್ಲೆಯ ಸಚಿವ ಆನಂದ್‌ ಸಿಂಗ್‌ಗೂ ಚಾಟಿ ಬೀಸಿದ್ದಾರೆ. ಕೇವಲ ಹೊಸ ಜಿಲ್ಲೆಯನ್ನು ಮಾಡಿಕೊಂಡರಷ್ಟೇ ಅಲ್ಲ. ಆ ಜಿಲ್ಲೆಯ ಎಲ್ಲ  ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಬೇಕು. ಜಿಲ್ಲೆಯ ವಿಭಜನೆಯಿಂದ ಈ ಭಾಗದ ಜನರಿಗೆ ಆಗಿರುವ ಸಂಪೂರ್ಣ ಲಾಭ ಪಕ್ಷಕ್ಕೆ ಲಭಿಸುವಂತಾಗಬೇಕು ಎಂದು ಸೂಚಿಸಿದ್ದಾರೆ. ಇದೇ ವೇಳೆ, ಬಳ್ಳಾರಿಯಲ್ಲಿ ಹೊಸ ಪಕ್ಷ ಸ್ಥಾಪಿಸಿರುವ ಗಣಿ ಧಣಿ ಜನಾರ್ದನ ರೆಡ್ಡಿಯವರ ಬಗ್ಗೆಯೂ ಚರ್ಚೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next