ಕಲಬುರಗಿ: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ನೇತೃತ್ವ ವಹಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಮಾತ್ರ ಪ್ರಸ್ತುತ. ಉಳಿದ ಎಲ್ಲರ ಹೇಳಿಕೆಯೂ ಅಪ್ರಸ್ತುತ ಎಂದು ಇಂಧನ ಸಚಿವ ಸುನೀಲ್ ಕುಮಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಪಕ್ಷದ ಪರಮೋತ್ಛ ನಾಯಕರು. ನಾಯಕ್ವತದ ಕುರಿತಂತೆ ಅವರ ಹೇಳಿಕೆಯೇ ಅಂತಿಮ. ಉಳಿದಂತೆ ಯಾವುದೇ ಭಾವನೆಗಳು ಅಪ್ರಸ್ತುತ. ರಾಜ್ಯದಲ್ಲಿ ಶೇ.36ರಷ್ಟು ವಿದ್ಯುತ್ ರೈತರ ಪಂಪ್‌ಸೆಟ್‌ಗಳಿಗೆ ವಿನಿಯೋಗಿಸಲಾಗುತ್ತಿದ್ದು, ಇದನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ. ಸಾಮಾನ್ಯ ಬಡ ರೈತರಿಗೆ ಹಾಗೂ ಶ್ರೀಮಂತರಿಗೂ ಒಂದೇ ರೀತಿ ಇದೆ. ಆದ್ದರಿಂದ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಶ್ರೀಮಂತರು ಸಬ್ಸಿಡಿ ಬಿಟ್ಟು ಕೊಟ್ಟು ತಮ್ಮ ಪಂಪ್ ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಸುವಂತೆ ಆಗಬೇಕು ಎಂದರು.
ಇದನ್ನೂ ಓದಿ:ಹು-ಧಾ ಪಾಲಿಕೆ ಚುನಾವಣೆ: ತಲೆ ಕೆಳಗಾದ ಲೆಕ್ಕಾಚಾರ
ಪಂಪ್‌ಸೆಟ್‌ಗಳ ವಿದ್ಯುತ್ ಕಟ್ಟಲು ಸಬಲರಾಗಿರುವವರು ಮತ್ತು ಆರ್ಥಿಕವಾಗಿ ಶಕ್ತರಿದ್ದವರು ವಿದ್ಯುತ್ ಬಿಲ್ ಕಟ್ಟಿದರೆ ಉತ್ತಮ. ಇದರಿಂದ ಇಲಾಖೆಗೆ ಆದಾಯವೂ ಬರಲಿದೆ. ಸಬ್ಸಿಡಿಯಿಂದ ಉಳಿದ ವಿದ್ಯುತ್‌ನ್ನು ಮತ್ತಷ್ಟು ರೈತರಿಗೆ ನೀಡಲು ಅನುಕೂಲವೂ ಆಗಲಿದೆ. ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವುದು ಸರ್ಕಾರದ ಆದ್ಯತೆ ಆಗಿದೆ. ಹೊಸದಾಗಿ ಸಬ್ ಸ್ಟೇಷನ್‌ಗಳ ಆರಂಭಿಸಲು ಯೋಜಿಸಲಾಗಿದೆ ಎಂದರು.
ಯಾವುದೇ ರೀತಿಯ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಯನ್ನು 24 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಈಗಾಗಲೇ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ವಿದ್ಯುತ್ ಕಾಮಗಾರಿಗಳಿಗೆ ಲಂಚ ಪಡೆಯುವ ಅಧಿಕಾರಿಗಳು ಅಥವಾ ಸಿಬ್ಬಂದಿ ವಿರುದ್ಧ ನಿಖರ ಮಾಹಿತಿ ಮತ್ತು ದೂರು ಕೊಟ್ಟಲ್ಲಿ ಅಂತಹ ಅಧಿಕಾರಿಗಳ ವಿರುದ್ಧ 24 ಗಂಟೆಯಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.