ಹೊಸದಿಲ್ಲಿ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯುವ ಸ್ಥಳವನ್ನು ಬದಲಾಯಿಸಲಾಗಿರುವ ಬಗ್ಗೆ ಬಿಜೆಪಿ ಸತ್ಯವನ್ನು ತಿರುಚಿ ಅಪಪ್ರಚಾರ ನಡೆಸುತ್ತಿರುವುದನ್ನು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.
‘ಮಮತಾ ಬ್ಯಾನರ್ಜಿ ಸರಕಾರದ ಹೆಲಿಕಾಪ್ಟರ್ ಪ್ರತೀ ಬುಧವಾರ ಮಾಲ್ಡಾ ವಿಮಾನ ನಿಲ್ದಾಣದ ಹೆಲಿ ಪ್ಯಾಡ್‌ನಲ್ಲಿ ಇಳಿಯುತ್ತದೆ; ಆದರೆ ಅಮಿತ್ ಶಾ ಹೆಲಿಕಾಪ್ಟರ್ ಇಳಿಯುವುದಕ್ಕೆ ಮಮತಾ ಸರಕಾರ ಅನುಮತಿ ನಿರಾಕರಿಸಿದೆ’ ಎಂದು ಬಿಜೆಪಿ ಹೇಳಿತ್ತು.
‘ಮಾಲ್ಡಾ ವಿಮಾನ ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಪೊಲೀಸರ ಸೂಚನೆ ಮೇರೆಗೆ ನನ್ನ ಹೆಲಿಕಾಪ್ಟರ್ ಇಳಿಯುವ ಸ್ಥಳ ಕೂಡ ಬದಲಾಗಿದೆ. ಅಂತಿರುವಾಗ ಭದ್ರತಾ ಕಾರಣಕ್ಕೆ ಅಮಿತ್ ಶಾ ಹೆಲಿಕಾಪ್ಟರ್ ಇಳಿಯುವುದಕ್ಕೆ ಬೇರೆ ತಾಣ ಸೂಚಿಸಲಾಗಿದೆ. ಇದರಲ್ಲಿ ರಾಜಕೀಯವೇನೂ ಇಲ್ಲ. ನಾವು ಅವರಿಗೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದೇವೆ; ಏಕೆಂದರೆ ನಮಗೆ ಪ್ರಜಾಸತ್ತೆಯಲ್ಲಿ ನಂಬಿಕೆ ಇದೆ; ಆದರೆ ಬಿಜೆಪಿ ಅನಗತ್ಯವಾಗಿ ಸತ್ಯವನ್ನು ತಿರುಚಿ ಜನರನ್ನು ದಾರಿ ತಪ್ಪಿಸುತ್ತಿದೆ’ ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈಚೆಗಷ್ಟೇ ಎಚ್1ಎನ್1 ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅಮಿತ್ ಶಾ ಅವರು ಜನವರಿ 22ರಂದು ಮಾಲ್ಡಾದಲ್ಲಿ ರಾಲಿಯೊಂದನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವನ್ನು ಇರಿಸಿಕೊಳ್ಳಲಾಗಿದೆ.
ಮಾಲ್ಡಾ ವಿಭಾದ ಪಿಡಬ್ಲ್ಯುಡಿ ಎಕ್ಸಿಕ್ಯುಟಿವ್ ಇಂಜಿನಿಯರ್ ವರದಿ ಪ್ರಕಾರ ಮಾಲ್ಡಾ ವಿಮಾನ ನಿಲ್ದಾಣವನ್ನು ಮೇಲ್ಮಟ್ಟಕೇರಿಸುವ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಭರದಿಂದ ನಡೆಯುತ್ತಿವೆ. ರನ್‌ವೇ ಉದ್ದಕ್ಕೂ ಉಸುಕು, ಮಣ್ಣು , ನಿರ್ಮಾಣ ಪರಿಕರಗಳು ರಾಶಿ ಬಿದ್ದಿವೆ. ಹಾಗಾಗಿ ಇನ್ನೊಂದು ವಾರದ ಮಟ್ಟಿಗೆ ಹೆಲಿಕಾಪ್ಟರ್ ಇಳಿಯುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಮಾಲ್ಡಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪತ್ರ ಮೂಲಕ ಬಿಜೆಪಿಗೆ ತಿಳಿಸಿದ್ದರು.