ಅಹ್ಮದಾಬಾದ್: “ಮಹಾತ್ಮ ಗಾಂಧಿಯವರ ಸ್ವದೇಶಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್ ಚಿಂತನೆಗಳ ಮೂಲಕ ಹೊಸ ಅರ್ಥ ನೀಡಿದ್ದಾರೆ..” ಹೀಗೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಅವರು ಅಹ್ಮದಾಬಾದ್‌ನ ಸಬರ್ಮತಿ ನದೀ ದಂಡೆಯ ಬಳಿ ಬೃಹತ್ ಗೋಡೆ ಚಿತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಪುಣ್ಯತಿಥಿಯ ಹಿನ್ನೆಲೆಯಲ್ಲಿ 100 ಚದರ ಮೀ. ಅಗಲದ ಅಲ್ಯುಮಿನಿಯಮ್ ಫಲಕದಲ್ಲಿ 2,975 ಮಣ್ಣಿನ ಪಾತ್ರೆಗಳನ್ನು ಬಳಸಿ ಭಿತ್ತಿಚಿತ್ರ ರಚಿಸಲಾಗಿದೆ. ಇದಕ್ಕೆ ದೇಶಾದ್ಯಂತ 75 ಕುಶಲಕರ್ಮಿಗಳು ನೆರವಾಗಿದ್ದಾರೆ.
ಈ ಗೋಡೆಚಿತ್ರದ ಉದ್ಘಾಟನೆ ವೇಳೆ ಮಾತನಾಡಿದ ಅಮಿತ್ ಶಾ, ಗಾಂಧಿಯವರು ಕೇವಲ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಹೇಗೆ ಮರುನಿರ್ಮಾಣ ಮಾಡಬೇಕು ಎಂಬುದಕ್ಕೆ ಹಲವು ಮಾರ್ಗಗಳನ್ನೂ ಹಾಕಿಕೊಟ್ಟರು. ಸ್ವದೇಶಿ, ಸತ್ಯಾಗ್ರಹ, ಸ್ವಭಾಷೆ, ಸಾಧನ ಶುದ್ಧಿ, ಅಪರಿಗ್ರಹ (ವಸ್ತುಗಳನ್ನು ಸಂಗ್ರಹಿಸದಿರುವುದು), ಪ್ರಾರ್ಥನೆ, ಉಪವಾಸ, ಸರಳತೆಗಳೆಲ್ಲ ಅವರು ತೋರಿದ ಮಾರ್ಗಗಳು.
ವಿಪರ್ಯಾಸವೆಂದರೆ ಇವನ್ನೆಲ್ಲ ಮರೆಯಲಾಗಿದೆ. ಮೋದಿ ಪ್ರಧಾನಿಯಾದ ನಂತರ ಇವಕ್ಕೆಲ್ಲ ಹೊಸಜೀವವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.