Advertisement

ಪರಿವರ್ತನಾ ರಥಯಾತ್ರೆಗೆ ನಾಳೆ ಅಮಿತ್‌ ಶಾ ಚಾಲನೆ

08:35 AM Nov 01, 2017 | |

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸಾರಥ್ಯದಲ್ಲಿ ಸಂಚರಿಸುವ “ನವಕರ್ನಾಟಕ ನಿರ್ಮಾಣಕ್ಕೆ ಪರಿವರ್ತನಾ ಯಾತ್ರೆ’ಗೆ ನ.2ರ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಚಾಲನೆ ನೀಡಲಿದ್ದಾರೆ. 

Advertisement

ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಯಾತ್ರೆಯ ಬಗ್ಗೆ ಮಾಹಿತಿ ನೀಡಿದ ಯಡಿಯೂರಪ್ಪ, “ಇದೊಂದು ಐತಿಹಾಸಿಕ ಯಾತ್ರೆಯಾಗಲಿದೆ’ ಎಂದು ಬಣ್ಣಿಸಿದರು. ಬೆಂಗಳೂರು ಹೊರವಲಯದ ಬಿಐಇಸಿಯಲ್ಲಿ 3 ಲಕ್ಷ ಕಾರ್ಯಕರ್ತರ ಸಮ್ಮುಖ ಅಮಿತ್‌ ಷಾ ಯಾತ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಯಾತ್ರೆ ಉದ್ಘಾಟನೆ ಸಂದರ್ಭದಲ್ಲಿ ಬೆಂಗಳೂರು ಸುತ್ತಮುತ್ತಲಿನ 16-17 ಜಿಲ್ಲೆಗಳ ಪ್ರತಿ ಬೂತ್‌ ಗಳಿಂದ 3ಲಕ್ಷ ಕಾರ್ಯಕರ್ತರು 1.50 ಲಕ್ಷ ಬೈಕ್‌ಗಳ ಮೂಲಕ ಸಮಾವೇಶಕ್ಕೆ ಆಗಮಿಸಲಿದ್ದಾರೆ. ದೊಡ್ಡ ಮಟ್ಟದ ಬೈಕ್‌ ರ್ಯಾಲಿ ಇದಾಗಲಿದೆ. 

ಬೆಂಗಳೂರು ನಂತರ ತುಮಕೂರಿಗೆ ಯಾತ್ರೆ ಪ್ರಯಾಣ ಬೆಳೆಸಲಿದೆ. ನಂತರ ಡಿ.21 ರಂದು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಭಾಗದ ಬೃಹತ್‌ ಸಮಾವೇಶವನ್ನು ನಡೆಸಲಾಗುತ್ತದೆ. ಅಲ್ಲಿಯೂ ಒಂದೂವರೆ ಲಕ್ಷ ಬೈಕ್‌ಗಳಲ್ಲಿ 3 ಲಕ್ಷ ಕಾರ್ಯಕರ್ತರು ಆಗಮಿಸಲಿದ್ದಾರೆ. ಬೆಂಗಳೂರು ಮಾದರಿಯ ಸಮಾವೇಶವನ್ನೇ ಹುಬ್ಬಳ್ಳಿಯಲ್ಲೂ ನಡೆಸಲಾಗುತ್ತದೆ. ಪ್ರಧಾನಿ ಮೋದಿ ಅವರಿಗೆ ಸಮಾವೇಶಕ್ಕೆ ಆಗಮಿಸುವಂತೆ ವಿನಂತಿಸಲಾಗಿದೆ. ಅವರು ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಜನವರಿ 28 ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿ ನವಕರ್ನಾಟಕ ಯಾತ್ರೆಯನ್ನು ಮುಕ್ತಾಯಗೊಳಿಸಲಾಗುತ್ತದೆ. ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಕೊಡಗಿನಲ್ಲಿ ಯಾತ್ರೆ ತಡೆಗೆ ಸರ್ಕಾರ ಷಡ್ಯಂತ್ರ:
ಯಾತ್ರೆಯ ಸಂಚಾಲಕಿ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, “ಕೊಡಗಿನ ಸೋಮವಾರಪೇಟೆಯಲ್ಲಿ ಸಭೆ ನಡೆಸಲು ಸರ್ಕಾರ
ಅನುಮತಿ ನೀಡಿಲ್ಲ. ಹಾಗಾಗಿ ಅದನ್ನು ಪುತ್ತೂರಿಗೆ ಸ್ಥಳಾಂತರ ಮಾಡಲಾಗಿದೆ. ಸೋಮವಾರಪೇಟೆಯಲ್ಲಿ ಸಭೆಗೆ ಅವಕಾಶ ನೀಡದೆ ಇರುವುದರ ಹಿಂದೆ ಸರ್ಕಾರದ ಕುತಂತ್ರ ಇದೆ’ ಎಂದು ಆರೋಪಿಸಿದರು. ಶಾಂತಿಯುತವಾಗಿ ನಾವು ಯಾತ್ರೆ ಮಾಡು ತ್ತೇವೆ. ಕೊಡಗಿನ ಜಿಲ್ಲಾಧಿಕಾರಿ, ಪೋಲಿಸ್‌ ವರಿಷ್ಠಾಧಿಕಾರಿಗಳು ಅನುಮತಿ ನೀಡಬೇಕೆಂದು ಮಾಧ್ಯಮಗಳ ಮೂಲಕ ವಿನಂತಿ ಮಾಡುತ್ತೇನೆಂದು ಶೋಭಾ ಕರಂದ್ಲಾಜೆ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ,ಸಂಸದ ಪಿ.ಸಿ.ಮೋಹನ್‌, ಮಾಜಿ ಸಚಿವ ಪುಟ್ಟಸ್ವಾಮಿ ಮತ್ತಿತರರಿದ್ದರು.

Advertisement

ಜೋಕ್‌ ಆಫ್ ದಿ ಇಯರ್‌
ಪ್ರಧಾನಿ ಮೋದಿಯವರಿಗೆ ತಮ್ಮನ್ನು ಕಂಡರೆ ಭಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದು, ಜೋಕ್‌ ಆಫ್ ದಿ ಇಯರ್‌ ಆಗಿದೆ. ಆಚಾರ ಇಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡಬಹುದು ಎನ್ನುವಂತೆ ಸಿದ್ದರಾಮಯ್ಯ ಪ್ರಧಾನಿ ಬಗ್ಗೆ ಟೀಕೆ ಮಾಡಿದ್ದಾರೆಂದು ಯಡಿಯೂರಪ್ಪ ಆರೋಪಿಸಿದರು. ಪ್ರಧಾನಿ ಮೋದಿಯವರು ಉಪವಾಸವಿದ್ದು, ಧರ್ಮಸ್ಥಳದಲ್ಲಿ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೀನು ಮಾತ್ರವಲ್ಲ ಕೋಳಿ ಮಾಂಸವನ್ನೂ ತಿಂದು ದರ್ಶನ ಪಡೆದಿದ್ದೇನೆ.
ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವುದು ಭಕ್ತ ಕೋಟಿಗೆ ಅಪಮಾನ ಮಾಡುವ ವರ್ತನೆಯಾಗಿದೆ. ಇದನ್ನು ನಾನು ಖಂಡಿಸುತ್ತೇನೆಂದು ಬಿಎಸ್‌ವೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next