ತಿರುವನಂತಪುರಂ: ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ದಿಢೀರ್ ಪ್ರವಾಸವನ್ನು ರದ್ದುಗೊಳಿಸಿ ದೆಹಲಿಗೆ ತೆರಳಿದ್ದಾರೆ. ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗ್ರಾಮದತ್ತ ಶಾ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ಜನರಕ್ಷಾ ಯಾತ್ರೆ ನಡೆಯಬೇಕಾಗಿತ್ತು.
ಪಿಣರಾಯಿ ಅವರ ಗ್ರಾಮದ ಸುತ್ತಮುತ್ತ ಬಿಜೆಪಿ ಬಾವುಟ, ಪೋಸ್ಟರ್ ಗಳನ್ನು ಹಾಕುವ ಮೂಲಕ ಶಾ ಅವರನ್ನು ಬರಮಾಡಿಕೊಳ್ಳಲು ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾದು ಕುಳಿತಿದ್ದರು. ಆದರೆ ಅಮಿತ್ ಶಾ ಅವರು ದಿಢೀರ್ ಆಗಿ ಬೆಳಗ್ಗೆ ಮಂಗಳೂರಿನಿಂದ ದೆಹಲಿಗೆ ತೆರಳಿದ್ದರು.
ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ ಆಗಿದ್ದು, ಅವರಿಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ತುರ್ತು ಮಾತುಕತೆ ನಡೆಸುವ ನಿಟ್ಟಿನಲ್ಲಿ ತೆರಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಆದರೆ ಜನರಕ್ಷಾ ಯಾತ್ರೆಗೆ ಜನ ಬೆಂಬಲ ಇಲ್ಲದ ಹಿನ್ನೆಲೆಯಲ್ಲಿ ಶಾ ಅವರು ಪ್ರವಾಸ ಮೊಟಕುಗೊಳಿಸಿದ್ದಾರೆಂಬ ಊಹಾಪೋಹವನ್ನು ಬಿಜೆಪಿ ಮುಖಂಡರು ತಳ್ಳಿಹಾಕಿದ್ದಾರೆ.
ಜನರ ಸ್ಪಂದನೆ ಇಲ್ಲದ ಕಾರಣಕ್ಕೆ ಪ್ರವಾಸ ಮೊಟಕುಗೊಳಿಸಿಲ್ಲ, ಅಲ್ಲದೇ 2 ದಿನಗಳ ಹಿಂದಷ್ಟೇ ಚಾಲನೆ ನೀಡಿದ್ದ ಜನರಕ್ಷಾ ಯಾತ್ರೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಯಾತ್ರೆಯ ಕೊನೆಯ ಸಮಾವೇಶದಲ್ಲಿ ಮಾತ್ರ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ