ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ, “ದ ಕಾಶ್ಮೀರ್ ಫೈಲ್ಸ್’ ಚಿತ್ರ ತಂಡ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ, ಚಿತ್ರಕ್ಕೆ ಕೇಂದ್ರದ ಬೆಂಬಲ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿತು.
ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಕಲಾವಿದರಾದ ಅನುಪಮ್ ಖೇರ್, ಪಲ್ಲವಿ ಜೋಷಿ ಹಾಗೂ ನಿರ್ಮಾಪಕ ಅಭಿಷೇಕ್ ತಂಡದಲ್ಲಿದ್ದರು.
ಮತ್ತೊಂದೆಡೆ, ಅಸ್ಸಾಂ ಸರ್ಕಾರ ಅಲ್ಲಿನ ಸರ್ಕಾರಿ ನೌಕರರಿಗೆ ಈ ಸಿನಿಮಾ ನೋಡಲು ಅರ್ಧ ದಿನ ರಜೆ ನೀಡುವ ನಿರ್ಧಾರ ಕೈಗೊಂಡಿದೆ.
ಮಹಾರಾಷ್ಟ್ರ , ಮಧ್ಯಪ್ರದೇಶ ಸರ್ಕಾರಗಳು, ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಬೇಕೆಂದು ಆಗ್ರಹಿಸಿವೆ.
ಆದರೆ, ಈ ಚಿತ್ರವನ್ನು ಬೆಂಬಲಿಸುವ ಮೂಲಕ ಕೇಂದ್ರ ಸರ್ಕಾರ, ಕಾಶ್ಮೀರಿ ಪಂಡಿತರ ನೋವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.