Advertisement

ವಿಮೋಚನೆ Vs ಏಕೀಕರಣ; ತೆಲಂಗಾಣದಲ್ಲಿ ಒಂದೇ ಕಾರ್ಯಕ್ರಮ, ಭಿನ್ನ ಹೆಸರು

11:46 PM Sep 17, 2022 | Team Udayavani |

ಹೈದರಾಬಾದ್‌: ಶನಿವಾರ ತೆಲಂಗಾಣದಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್‌ ಪಕ್ಷಗಳು ಒಂದೇ ಕಾರ್ಯಕ್ರಮವನ್ನು ಭಿನ್ನ ಹೆಸರಲ್ಲಿ ಆಚರಿಸಿಕೊಂಡಿವೆ. ನಿಜಾಮರ ಆಡಳಿತದಿಂದ ಹೈದರಾಬಾದ್‌ ಸ್ವತಂತ್ರಗೊಂಡ ನೆನಪಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೈದರಾಬಾದ್‌ನಲ್ಲಿ ಧ್ವಜಾರೋಹಣಗೈದು “ಹೈದರಾಬಾದ್‌ ವಿಮೋಚನಾ ದಿನ’ವನ್ನು ಆಚರಿಸಿದ್ದಾರೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು, ಭಾರತದ ಒಕ್ಕೂಟಕ್ಕೆ ಹೈದರಾಬಾದ್‌ ಸೇರ್ಪಡೆಗೊಂಡ ನೆನಪಿನಲ್ಲಿ ಧ್ವಜಾರೋಹಣ ನೆರವೇರಿಸಿ, “ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ’ವನ್ನು ಆಚರಿಸಿದ್ದಾರೆ. ಬಳಿಕ ಇಬ್ಬರು ನಾಯಕರೂ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Advertisement

ರಜಾಕಾರರ ಭಯ ಮಾಸಿಲ್ಲ: ಶಾ
– 75 ವರ್ಷಗಳೇ ಕಳೆದರೂ ಇಲ್ಲಿ ಆಡಳಿತದಲ್ಲಿದ್ದ ಸರಕಾರಗಳು ವೋಟ್‌ಬ್ಯಾಂಕ್‌ ರಾಜಕೀಯಕ್ಕಾಗಿ ಹೈದರಾಬಾದ್‌ ವಿಮೋಚನಾ ದಿನವನ್ನು ಆಚರಿಸುವ ಧೈರ್ಯ ಮಾಡಲಿಲ್ಲ.
-ಚುನಾವಣೆ, ಪ್ರತಿಭಟನೆಗಳ ವೇಳೆ ಅನೇಕರು(ಕೆಸಿಆರ್‌) ವಿಮೋಚನಾ ದಿನ ಆಚರಿಸುವುದಾಗಿ ವಾಗ್ಧಾನ ಮಾಡಿದ್ದರು. ಆದರೆ, ಗೆದ್ದ ಬಳಿಕ ರಜಾಕಾರರ
(ನಿಜಾಮರ ಸಶಸ್ತ್ರ ಬೆಂಬಲಿಗರು)ಗಳ ಭಯದಿಂದ ಹಿಂದೇಟು ಹಾಕಿದರು.
– ಈಗ ಅಧಿಕೃತವಾಗಿ “ಹೈದರಾಬಾದ್‌ ವಿಮೋಚನಾ ದಿನ’ ಆಚರಣೆಯ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ.
– ಇನ್ನಾದರೂ ರಜಾಕಾರರ ಬಗ್ಗೆ ಭಯ ಬಿಡಿ. ಅವರು ಈ ದೇಶದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನಾವು ಸ್ವಾತಂತ್ರ್ಯ ಪಡೆದು 75 ವರ್ಷಗಳೇ ಕಳೆದವು.
– ಸರ್ದಾರ್‌ ಪಟೇಲರು ಇಲ್ಲದೇ ಇರುತ್ತಿದ್ದರೆ ಹೈದರಾಬಾದ್‌ ವಿಮೋಚನೆಗೊಳ್ಳಲು ಇನ್ನೂ ಅನೇಕ ವರ್ಷಗಳೇ ಹಿಡಿಯುತ್ತಿದ್ದವು. ರಜಾಕಾರರನ್ನು ಸೋಲಿಸುವವರೆಗೂ ಅಖಂಡ ಭಾರತದ ಕನಸು ನನಸಾಗಲಾರದು ಎಂಬುದು ಅವರಿಗೆ ಗೊತ್ತಿತ್ತು.

ದ್ವೇಷ ಹುಟ್ಟಿಸಲು ಬಿಡಲ್ಲ: ಕೆಸಿಆರ್‌
– ಸೆ.17ರ ಐತಿಹಾಸಿಕ ಘಟನೆಯೊಂದಿಗೆ ಸಂಬಂಧವೇ ಇಲ್ಲದವರು ಈಗ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲೆಂದು ತೆಲಂಗಾಣದ ಉಜ್ವಲ ಇತಿಹಾಸವನ್ನು ಮಲಿನಗೊಳಿಸುತ್ತಿದ್ದಾರೆ
– ದೇಶ ಮತ್ತು ತೆಲಂಗಾಣದಲ್ಲಿರುವ ಕೋಮುಶಕ್ತಿಗಳು ಸಮಾಜವನ್ನು ವಿಭಜಿಸಿ, ಜನರ ನಡುವೆ ದ್ವೇಷ ಹುಟ್ಟುಹಾಕಲು ಪ್ರಯತ್ನಿಸುತ್ತಿವೆ.
– ಧಾರ್ಮಿಕ ಮತಾಂಧತೆ ಹೆಚ್ಚಿದರೆ, ಅದು ದೇಶದ ಜೀವನಾಡಿಯನ್ನೇ ನಾಶ ಮಾಡುತ್ತದೆ. ಅದರಿಂದ ಮಾನವ ಸಂಬಂಧವೂ ಹದಗೆಡುತ್ತದೆ.
– ಕೆಲವರು ತಮ್ಮ ವಿಷಕಾರಿ ಹೇಳಿಕೆಗಳ ಮೂಲಕ ದ್ವೇಷ ಹುಟ್ಟಿಸುತ್ತಿದ್ದಾರೆ. ಮತಾಂಧತೆಯು ದೇಶಕ್ಕೆ ಅತ್ಯಂತ ಅಪಾಯಕಾರಿ
– ಈ ಭ್ರಷ್ಟ ಹಾಗೂ ದುಷ್ಟಶಕ್ತಿಗಳ ಪ್ರಯತ್ನವನ್ನು ತೆಲಂಗಾಣದ ಜನತೆ ವಿಫ‌ಲಗೊಳಿಸಬೇಕು. ಇದನ್ನು ನೀವು ಮರೆತರೆ ಕಣ್ಣು ಮಿಟುಕಿಸುವಷ್ಟರಲ್ಲಿ ನಮ್ಮ ಇಡೀ ಸಮಾಜವು ಪ್ರಕ್ಷುಬ್ಧತೆಯ ಬೆಂಕಿಗೆ ಬೀಳುವ ಎಲ್ಲ ಅಪಾಯವೂ ಇದೆ

Advertisement

Udayavani is now on Telegram. Click here to join our channel and stay updated with the latest news.

Next