ಮಂಗಳೂರು: ಕೇಂದ್ರ ಸಚಿವರಾದ ಬಳಿಕ ಶನಿವಾರ ಮೊದಲನೇ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಅಮಿತ್ ಶಾ ಅವರ ಪುತ್ತೂರಿನ ಸಮಾವೇಶ ಹಾಗೂ ಮಂಗಳೂರಿನ ಸಭೆಗೆ ಭರ್ಜರಿ ಸಿದ್ಧತೆ ನಡೆದಿದೆ.
ಅಮಿತ್ ಶಾ ಅವರು ಈಶ್ವರ ಮಂಗಲಕ್ಕೆ ಮಧ್ಯಾಹ್ನ 1.45ಕ್ಕೆ ಆಗಮಿಸಿ, ಅರ್ಧ ತಾಸು ಸರಳ ಸಮಾ ರಂಭದಲ್ಲಿ ಪಾಲ್ಗೊಳ್ಳುವರು. ಬಳಿಕ ಅಪರಾಹ್ನ 3ಕ್ಕೆ ಪುತ್ತೂರಿನ ತೆಂಕಿಲದಲ್ಲಿ ನಡೆಯುವ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಸಹಕಾರಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ಅಲ್ಲಿ ಅಡಿಕೆ ಬೆಳೆಗಾರರು, ಸಹಕಾರಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಅಲ್ಲಲ್ಲಿ ಎಲ್‌ಇಡಿ ಪರದೆ ಹಾಕುವ ಮೂಲಕ ಎಲ್ಲರಿಗೂ ಭಾಷಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಭೇಟಿಯನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಪುತ್ತೂರು ಸಮಾವೇಶದ ಬಳಿಕ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 5ಕ್ಕೆ ಆಗಮಿಸುವರು. ಕೆಂಜಾರು ಜಂಕ್ಷನ್‌ನಲ್ಲಿ ಸಂಜೆ 4ಕ್ಕೆ ಸಮಾವೇಶಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಸಂಜೆ 5ಕ್ಕೆ ಅವರು ಶ್ರೀದೇವಿ ಕಾಲೇಜಿಗೆ ತೆರಳುವರು. ದಾರಿ ಮಧ್ಯೆ ಅವರನ್ನು ಭರ್ಜರಿ ಯಾಗಿ ಸ್ವಾಗ ತಿಸಲಾಗುವುದು.
ಒಂದು ವೇಳೆ ಅಮಿತ್ ಶಾ ಮಾತನಾಡಲು ಬಯಸಿದರೆ ವಾಹನದ ಮೇಲೆಯೇ ನಿಂತು ಭಾಷಣ ಮಾಡಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಅವರ ಇಚ್ಛೆ ಹಾಗೂ ಭದ್ರತ ವಿಚಾರ ಗಳನ್ನು ಅವಲಂಬಿಸಿರಲಿದೆ.
ಬಳಿಕ ಅವರು ಬಿಜೆಪಿಯ ಶಿವಮೊಗ್ಗ, ಮಂಗಳೂರು ವಿಭಾಗಗಳ ಸಭೆಯಲ್ಲಿ ಭಾಗವಹಿಸಿ, ನಾಯಕರಿಗೆ ಚುನಾವಣೆ ಸಂಬಂಧಿಸಿ ಸೂಚನೆಗಳನ್ನು ನೀಡುವರು. ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರ ಪ್ರಮುಖರು ಭಾಗವಹಿಸುವರು.