ನವದೆಹಲಿ: ದೇಶಿ ನಿರ್ಮಿತ, ಅತ್ಯಂತ ವೇಗದ ಇಂಜಿನ್ ರಹಿತ ವಂದೇ ಭಾರತ್ ಎಕ್ಸ್ ಪ್ರೆಸ್ (ಟ್ರೈನ್ 18) ರೈಲಿಗೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕೇವಲ 8ಗಂಟೆಗಳಲ್ಲಿ 655 ಕಿಲೋ ಮೀಟರ್ ತಲುಪಲಿದೆ. ಅಕ್ಟೋಬರ್ 5ರಿಂದ ದೆಹಲಿ-ಕತ್ರಾ ನಡುವೆ ಸಂಚಾರ ಆರಂಭಿಸಲಿದ್ದು, ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ವೈಷ್ಣೋದೇವಿ ದೇವಸ್ಥಾನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಕೊನೆಯ ನಿಲ್ದಾಣವಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅಮಿತ್ ಶಾ, ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಅಲ್ಲದೇ ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿ ಉದ್ದೇಶ ಕೂಡ ಹೊಂದಿರುವುದಾಗಿ ತಿಳಿಸಿದರು.
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ 370ನೇ ವಿಧಿ ದೊಡ್ಡ ಅಡ್ಡಿಯಾಗಿತ್ತು. ಇನ್ನು ಹತ್ತು ವರ್ಷಗಳಲ್ಲಿ ಈ ಪ್ರದೇಶ ಅತ್ಯಂತ ಅಭಿವೃದ್ದಿ ಕಾಣಲಿದೆ ಎಂದು ಶಾ ವಿಶ್ವಾಸವ್ಯಕ್ತಪಡಿಸಿದರು.
2022ರ ಆಗಸ್ಟ್ 15ಕ್ಕೂ ಮೊದಲು ಕಾಶ್ಮೀರದಿಂದ ಕನ್ಯಾಕುಮಾರಿ ರೈಲ್ವೆ ಸಂಪರ್ಕ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಈ ಸಂದರ್ಭದಲ್ಲಿ ಹೇಳಿದರು.