Advertisement

ಮಹದಾಯಿ ವಿವಾದಕ್ಕೆ ಶಾ ಎಂಟ್ರಿ?

08:00 AM Nov 28, 2017 | |

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆ ಹರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ
ನೇರ ಪ್ರವೇಶ ಮಾಡಿದ್ದಾರೆಂದು ತಿಳಿದುಬಂದಿದೆ.

Advertisement

2018ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ಯೋಜನೆ ಲಾಭ ಪಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಮುಂಬೈ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯವಿರುವ ಪ್ರದೇಶಕ್ಕೆ ಮಹದಾಯಿ ನೀರಿನ ಬೇಡಿಕೆಗೆ ಹೋರಾಟ ನಡೆಯುತ್ತಿದೆ. ಈ ಯೋಜನೆ ಅನುಷ್ಠಾನಗೊಳ್ಳದ್ದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಜನರ ಬಳಿಗೆ ಹೋಗುವುದು ಕಷ್ಟವೆಂಬ ಆತಂಕವನ್ನು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇರವಾಗಿಯೇ ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ಗೆಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳ ಜೊತೆ ಸಂಧಾನಕ್ಕೆ ವೇದಿಕೆ ಸಿದಟಛಿಪಡಿಸಲು ಸೂಚನೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸ್ವತಃ ಅಮಿತ್‌ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಾತುಕತೆಗೆ ಒಪ್ಪಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಕರ್ನಾಟಕಕ್ಕೆ ಮಹದಾಯಿ ನೀರು ಬಿಡುವುದಾದರೆ, ಗೋವಾದಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತದೆಂಬ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಕರ್ನಾಟಕಕ್ಕೆ ಯೋಜನೆಯ ಅಗತ್ಯತೆ ಕುರಿತು ಮನೋಹರ್‌ ಪರಿಕ್ಕರ್‌ಗೆ ಮನವರಿಕೆ ಮಾಡಿಕೊಡಲು ಪ್ರಕಾಶ್‌
ಜಾವಡೇಕರ್‌ಗೆ ಅಮಿತ್‌ ಶಾ ಸೂಚಿಸಿದ್ದಾರೆ. ಗುಜರಾತ್‌ ಚುನಾವಣೆ ಮುಗಿದ ನಂತರ ಅಮಿತ್‌ ಶಾ ಎರಡೂ
ರಾಜ್ಯಗಳ ಮುಖ್ಯಮಂತ್ರಿ ಜೊತೆ ಮತ್ತೂಂದು ಸುತ್ತಿನ ಚರ್ಚೆ ನಡೆಸಿ, ಮಾತುಕತೆಯ ಮೂಲಕವೇ ವಿವಾದ ಬಗೆ ಹರಿಸಲು ಮುಂದಾಗಲಿದ್ದಾರೆ. 

ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಆ ಸಂದರ್ಭದಲ್ಲಿ ವಿವಾದವನ್ನು ಮಾತುಕತೆಯ ಮೂಲಕ ಬಗೆ ಹರಿಸುವ ಬಗ್ಗೆ ಘೋಷಣೆ ಮಾಡಲು ಬಿಜೆಪಿ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿಯೇ ರಾಜ್ಯ ಬಿಜೆಪಿ ನಾಯಕರು ಸದ್ಯ ಮಹದಾಯಿ ವಿಷಯ ಕುರಿತಂತೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ಸ್ವತಃ ಅಮಿತ್‌ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ ನಾಯಕರು ಮಹದಾಯಿ ವಿಷಯದಲ್ಲಿ ಮೌನ ವಹಿಸಿದ್ದಾರೆ. ಅದೇ ಧೈರ್ಯದಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಹದಾಯಿ ಹೋರಾಟಗಾರರಿಗೆ ಒಂದು ತಿಂಗಳಲ್ಲಿ ಸಿಹಿ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.

Advertisement

ಮುಂದಿನ ತಿಂಗಳು 3 ರಾಜ್ಯಗಳ ಸಿಎಸ್‌ಗಳ ಸಭೆ
ರಾಜ್ಯ ಸರ್ಕಾರ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸುವ ಕುರಿತಂತೆ ಚರ್ಚೆಗೆ ಪ್ರಯತ್ನ ನಡೆಸಿದೆ. ನ.10ರಂದು ಮಾತುಕತೆಗೆ ಸಮಯ ನಿಗದಿಯಾಗಿತ್ತಾದರೂ, ಗೋವಾ ಮುಖ್ಯ ಕಾರ್ಯದರ್ಶಿ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ. 

ಡಿಸೆಂಬರ್‌ನಲ್ಲಿ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಜಲ ಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ. ಮಹದಾಯಿ ನ್ಯಾಯಾಧಿಕರಣದ ಅವಧಿ 2018ರ ಆಗಸ್ಟ್‌ನಲ್ಲಿ ಅಂತ್ಯವಾಗಲಿದೆ.

ಅದಕ್ಕೂ ಮುನ್ನ ರಾಜ್ಯದಲ್ಲಿ ಚುನಾವಣೆ ಆಗಮಿಸುವುದರಿಂದ ಬಿಜೆಪಿ ಮಾತುಕತೆಯ ಮೂಲಕವೇ ಪರಿಹಾರದ ಪ್ರಯತ್ನಕ್ಕೆ ಕೈ ಹಾಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next